ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಜನವಸತಿ ಪ್ರದೇಶದಲ್ಲೇ ಮೊಸಳೆ ಕಾಣಿಸಿಕೊಂಡಿದ್ದು, ಆತಂಕ ಹೆಚ್ಚಿಸಿದೆ.
ನಗರದ ಅಂಬೆವಾಡಿಯ ನಾಗದೇವತಾ ದೇವಸ್ಥಾನದ ಸಮೀಪ ಜಿ ಪ್ಲಸ್ ಮನೆಗಳ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಕಾಮಗಾರಿಗಾಗಿ ತೆಗೆದ ಹೊಂಡದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ನಾಲ್ಕು ಅಡಿಗೂ ಹೆಚ್ಚು ಉದ್ದವಿರುವ ಮೊಸಳೆ ನೀರಿನಿಂದ ಹೊರಬಂದು ವಿಶ್ರಾಂತಿ ಪಡೆದಿದೆ. ಈ ವೇಳೆ ಸ್ಥಳೀಯ ನಿವಾಸಿಯೊಬ್ಬರು ತಮ್ಮ ಕ್ಯಾಮರಾದಲ್ಲಿ ಮೊಸಳೆಯ ದೃಶ್ಯ ಸೆರೆ ಹಿಡಿದಿದ್ದಾರೆ.
ಜನವಸತಿ ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಅಲ್ಲದೇ, ಸಮೀಪದಲ್ಲಿಯೇ ಶಾಲೆ ಕೂಡ ಇದ್ದು, ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಮಕ್ಕಳು ಶಾಲೆಗೆ ಹೋಗಿ ಬರುತ್ತಾರೆ. ದಾಂಡೇಲಿ ಮೊಸಳೆಗಳು ಅನೇಕರನ್ನು ಬಲಿ ಪಡೆದ ಹಿನ್ನಲೆ ಇದ್ದು, ಈ ಮೊಸಳೆ ಸ್ಥಳಾಂತರಿಸಬೇಕೆಂದು ಹೇಳಲಾಗಿದೆ.