ಹೊಂಗಿರಣ ಶಿವಮೊಗ್ಗ ತಂಡವು ಜೂ.1ರ ಸಂಜೆ 6ಕ್ಕೆ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ” ದನಾ ಕಾಯೋರ ದೊಡ್ಡಾಟ ಮತ್ತು ಶ್ರೀಕೃಷ್ಣ ಸಂಧಾನ” ಎಂಬ ಹಾಸ್ಯ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊಂಗಿರಣದ ಅಧ್ಯಕ್ಷ ಸಾಸ್ವೆಹಳ್ಳಿ ಸತೀಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ನಾಟಕವನ್ನು ಕಾಮಿಡಿ ಕಿಲಾಡಿಗಳು ಸೀಸನ್-3ರ ಫೈನಲಿಸ್ಟ್ ಹಾಗೂ ಹಲವು ಸಿನಿಮಾಗಳಲ್ಲಿ ನಟಿಸಿರುವ ತಂಡದ ಚಂದ್ರಶೇಖರ ಹಿರೇಗೋಣಿಗೆರೆ ನಿರ್ದೇಶನ ಮಾಡಿ ನಟಿಸಿದ್ದಾರೆ ಎಂದರು.
ಲಕ್ಷ್ಮಿ ನಿವಾಸ ಧಾರಾವಾಹಿ ವೆಂಕಿ ಪಾತ್ರದಲ್ಲಿ ಮಿಂಚುತ್ತಿರುವ ತಂಡದ ಕಲಾವಿದ ಚಂದ್ರಶೇಖರ ಶಾಸ್ತ್ರಿ ಜೊತೆಗೆ ಹಲವಾರು ಕಿರುತೆರೆ-ಹಿರಿತೆರೆಯಲ್ಲಿ ಗುರುತಿಸಿಕೊಂಡ ತಂಡದ ಕಲಾವಿದರು ಅಭಿನಯಿಸಲಿದ್ದಾರೆ ಎಂದರು.
ಈ ನಾಟಕ ಈಗಾಗಲೇ 95ಕ್ಕೂ ಹೆಚ್ಚಿನ ಪ್ರದರ್ಶನಗೊಂಡು ನಾಡಿನ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದೆ. ಈ ಪ್ರದರ್ಶನಕ್ಕೆ ಒಬ್ಬರಿಗೆ 50 ರೂ. ಪ್ರೋತ್ಸಾಹ ಧನ ನಿಗದಿಮಾಡಲಾಗಿದೆ. ಮುಂಗಡ ಟಿಕೇಟ್‌ಗಳು ಶ್ರೀನಿಧಿ ಕಾಂಪ್ಲೆಕ್ಸ್ ನಲ್ಲಿರುವ ಉಲ್ಲಾಸ್ ಸ್ಪೋರ್ಟ್ಸ್ ಮಳಿಗೆಯಲ್ಲಿ ದೊರೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ರ‍್ಯಾಂಕ್ ಪಡೆದ ತಂಡದ ಕಲಾವಿದರಾದ ಕೆ.ಸಿ. ಚುಕ್ಕಿ ಹಾಗೂ ನಾದ ಹಾಲಸ್ವಾಮಿ ಜೊತೆಗೆ ರಂಗಭೂಮಿ ವಿಷಯದಲ್ಲಿ ಪಿ.ಹೆಚ್.ಡಿ.ಪಡೆದ ಜಿ.ಆರ್.ಲವ ಹಾಗೂ ಡಿಲಿಟ್ ಪದವಿ ಪಡೆದ ಗಣೇಶ್ ಕೆಂಚನಾಳ ಅವರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ ಹಿರೇಗೊಣಿಗೆರೆ, ಗಿರೀಶ್ ದಿನ್ನೆಮನೆ ಉಪಸ್ಥಿತರಿದ್ದರು.