ನವದೆಹಲಿ: ದೆಹಲಿ ಗಡಿ ಪ್ರದೇಶದಲ್ಲಿ ನಿರಂತರ ಹೋರಾಟ ಕೈಗೊಂಡಿರುವ ರೈತರಿಗೆ ಅಂತರಾಷ್ಟ್ರೀಯ ಮಟ್ಟದ ಖ್ಯಾತನಾಮರು ಬೆಂಬಲ ಸೂಚಿಸಿದ್ದಾರೆ. ಪ್ರಸಿದ್ಧ ಪಾಪ್ ಗಾಯಕಿ ರಿಯಾನ ಮತ್ತು ಸ್ವೀಡನ್ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.
ಇದಕ್ಕೆ ಕೇಂದ್ರ ಸರ್ಕಾರ ಕಿಡಿಕಾರಿದೆ. ಸ್ಥಾಪಿತ ಹಿತಾಸಕ್ತಿಗಳು ಕೃಷಿ ಕಾಯ್ದೆಗಳ ವಿರುದ್ಧ ಅಂತರಾಷ್ಟ್ರೀಯ ಬೆಂಬಲ ಪಡೆಯಲು ಇಂತಹ ಪ್ರಯತ್ನ ನಡೆಸಿವೆ ಎಂದು ದೂರಲಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ, ವಿದೇಶಾಂಗ ಮಂತ್ರಾಲಯ ಮುಖ್ಯ ವಕ್ತಾರ ಅನುರಾಗ್ ಶ್ರೀವಾಸ್ತವ ವಿರುದ್ಧ ಕಿಡಿಕಾರಿದ್ದಾರೆ.
ಇವರೊಂದಿಗೆ ಭಾರತದ ಸೆಲೆಬ್ರಿಟಿಗಳು, ಸರ್ಕಾರ, ಕ್ರಿಕೆಟಿಗರು, ತಿರುಗೇಟು ನೀಡಿದ್ದಾರೆ. ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಟೀಮ್ ಇಂಡಿಯಾ ಆಟಗಾರರು, ಬಾಲಿವುಡ್ ತಾರೆಯರು ಕೂಡ ತಿರುಗೇಟು ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಟ್ವೀಟ್ ಗಳಿಂದ ಭಾರತಕ್ಕೆ ಉಂಟಾಗಿರುವ ಹಾನಿಯನ್ನು ಅಳಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಪರೋಕ್ಷವಾಗಿ ಭಾರತದ ಸೆಲೆಬ್ರಿಟಿಗಳು ಸರ್ಕಾರಕ್ಕೆ ಬೆಂಬಲ ಸೂಚಿಸುವಂತೆ ಟ್ವೀಟ್ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್ ಸೆಲೆಬ್ರಿಟಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣಕ್ಕೆ ಹಾನಿ ಉಂಟಾಗಿದೆ. ವಿದೇಶಿಯರಿಗೆ ಭಾರತದ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿರುವುದು ಮುಜುಗರ ತರುತ್ತದೆ. ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಿಂದ ಜಾಗತಿಕ ಮಟ್ಟದಲ್ಲಿ ಹಾನಿಯಾಗಿದೆ. ಇದನ್ನು ಕ್ರಿಕಟಿಗರು, ಸೆಲೆಬ್ರಿಟಿಗಳ ಟ್ವೀಟ್ ಗಳಿಂದ ಪರಿಹರಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸರ್ಕಾರವನ್ನು ಬೆಂಬಲಿಸಿದ ಸೆಲೆಬ್ರಿಟಿಗಳಿಗೆ ಟಾಂಗ್ ಕೊಟ್ಟಿದ್ದಾರೆ.