ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಈವರೆಗೆ 11 ಜನ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 154 ಮನೆಗಳು ಸಂಪೂರ್ಣ ಹಾನಿಯಾಗಿವೆ. 484 ಮನೆಗಳು ಭಾಗಶಃ ಹಾನಿಯಾಗಿದ್ದು, 65 ಸೇತುವೆಗಳಿಗೆ ಹಾನಿಯಾಗಿದೆ. ಮೂರು ಕಾಳಜಿ ಕೇಂದ್ರಗಳಲ್ಲಿ 138 ಸಂತ್ರಸ್ತರು ಆಶ್ರಯ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪೂರ್ಣ ಹಾನಿಯಾದ ಮನೆಗಳಿಗೆ 1.20 ಲಕ್ಷ ರೂಪಾಯಿ ಪರಿಹಾರ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 1.50 ಲಕ್ಷ ರೂಪಾಯಿ ಪರಿಹಾರ, ಅನಧಿಕೃತ ಮನೆಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಭಾಗಶಃ ಹಾನಿಯಾದ ಮನೆಗಳಿಗೆ 50,000 ರೂ. ಪರಿಹಾರ ನೀಡಲಾಗುವುದು. ಉಪಕರಣಗಳ ಹಾನಿಗೆ 5000 ರೂ. ಪರಿಹಾರ ನೀಡುತ್ತೇವೆ. 18 ಅಂಗನವಾಡಿಗಳ ದುರಸ್ತಿಗೆ 37 ಲಕ್ಷ ರೂ., 106 ಶಾಲೆಗಳ ದುರಸ್ತಿಗೆ 1.94 ಕೋಟಿ ತಕ್ಷಣ ಪರಿಹಾರ ನೀಡಲು ಗ್ರಾಪಂಗಳಿಗೂ ಅನುದಾನ ಬಿಡುಗಡೆ ಮಾಡಲಾಗಿದೆ.