ಡೆಹರಾಡೂನ್: ಸಮಾಜದಲ್ಲಿ ಸಮಾನತೆಯ ಸಂದೇಶ ಎಷ್ಟೇ ಸಾರಿದರೂ ಜಾತಿ ಎಂಬ ಪಿಡುಗು ತೊಲಗಿಸಲು ಸಾಧ್ಯವಾಗುತ್ತಿಲ್ಲ. ಇದು ಇನ್ನೂ ಜೀವಂತವಾಗಿದೆ ಎಂಬುವುದಕ್ಕೆ ಇಲ್ಲೊಂದು ಉದಾಹರಣೆ ವರದಿಯಾಗಿದೆ.
ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ದಲಿತ ಮಹಿಳೆ ತಯಾರಿಸುತ್ತಾಳೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಊಟ ಮಾಡುವುದನ್ನೇ ಬಿಟ್ಟಿದ್ದು, ಅಧಿಕಾರಿಗಳು ಕೂಡ ದಲಿತ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.
ಉತ್ತರಾಖಂಡ ರಾಜ್ಯದ ಚಂಪಾವತ್ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಇತ್ತೀಚೆಗಷ್ಟೇ ಈ ಶಾಲೆಗೆ ದಲಿತ ಮಹಿಳೆಯನ್ನು ಭೋಜನ ಮಾತೆ ಎಂದು ನೇಮಕ ಮಾಡಲಾಗಿತ್ತು. ಆದರೆ, ಈ ಮಹಿಳೆ ತನ್ನ ಕರ್ತವ್ಯಕ್ಕೆ ಹಾಜರಾಗುತ್ತಿದ್ದಂತೆ, ವಿದ್ಯಾರ್ಥಿಗಳು ಶಾಲೆಯ ಊಟದಿಂದ ಹಿಂದೆ ಸರಿದಿದ್ದರು.
ಅಂದಿನಿಂದ ವಿದ್ಯಾರ್ಥಿಗಳು ಮನೆಯಿಂದಲೇ ಊಟದ ಡಬ್ಬಿಗಳನ್ನು ತರಲು ಪ್ರಾರಂಭಿಸಿದರು. ಎಷ್ಟೇ ಹೇಳಿದರೂ ವಿದ್ಯಾರ್ಥಿಗಳು ಮಾತ್ರ ಶಾಲೆಯಲ್ಲಿನ ಊಟ ಮಾಡಲಿಲ್ಲ. ಭೋಜನ ಮಾತೆಯನ್ನು ಬದಲಾಯಿಸುವವರೆಗೂ ನಾವು ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ದಲಿತ ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಲ್ಲಿನ ಶಿಕ್ಷಣಾಧಿಕಾರಿ ಆರ್.ಸಿ. ಪುರೋಹಿತ್, ಮಹಿಳೆಯ ನೇಮಕಕ್ಕೆ ಇನ್ನೂ ಮೇಲಿನ ಅಧಿಕಾರಿಗಳು ಒಪ್ಪಿಗೆ ಸೂಚಿಸಿರಲಿಲ್ಲ. ಆದರೂ ಆ ಮಹಿಳೆಯನ್ನು ಕೆಲಸಕ್ಕೆ ನೇಮಕ ಮಾಡಲಾಗಿತ್ತು. ನೇಮಕದ ಸಂದರ್ಭದಲ್ಲಿ ನಿಯಮಗಳನ್ನು ಪಾಲನೆ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ದಲಿತ ಮಹಿಳೆ ಮಾಡಿದ್ದ ಊಟ ಮಾಡಲು ನಿರಾಕರಿಸಿದಾಗ ಅವರಿಗೆ ಬುದ್ಧಿ ಹೇಳಿ, ಸಮಾನತೆಯ ಸಾರ ಬೋಧಿಸಬೇಕಿತ್ತು. ಆದರೆ, ಅಧಿಕಾರಿಗಳು ಕೆಲಸದಿಂದ ವಜಾ ಮಾಡಬಾರದಾಗಿತ್ತು ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.