ಬೆಂಗಳೂರು: ಬಿಜೆಪಿ ಎಸ್.ಸಿ. ಮೋರ್ಚಾದ ರಾಜ್ಯ ಅಧ್ಯಕ್ಷರಿಗೆ “ನೀನು ಅಸ್ಪೃಶ್ಯ” ಎನ್ನುವ ಮೂಲಕ ಸಿದ್ದರಾಮಯ್ಯ ತಮ್ಮ ದಲಿತ ವಿರೋಧಿ ನಿಲುವನ್ನು ಎತ್ತಿ ತೋರಿಸಿದ್ದಾರೆ. ಇದು ಅಕ್ಷಮ್ಯ, ನಾಡಿನ ಸಮಸ್ತ ದಲಿತ ಸಮುದಾಯದವರಲ್ಲಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ದಲಿತ ವಿರೋಧಿ ಕಾಂಗ್ರೆಸ್ ಅಂದು ಅಂಬೇಡ್ಕರ್ ಅವರ ರಾಜಕೀಯ ಜೀವನಕ್ಕೆ ಎಳ್ಳು ನೀರು ಬಿಟ್ಟಿತ್ತು. ಇಂದೂ ಅದೇ ನೀತಿಯನ್ನು ಮುಂದುವರೆಸುತ್ತಿದೆ. ದಲಿತ ಸಿಎಂ ವಾದ ಮುನ್ನೆಲೆಗೆ ಬರುತ್ತಲೇ “ನಾನೇ ದೊಡ್ಡ ದಲಿತ” ಎನ್ನುವವರು ಒಂದು ಕಡೆಯಾದರೆ, “ಊಟ ಹೇಗಾದರೂ ನಾನು ಬೇಕು, ಊಟ ಮಾತ್ರ ಬೇರೆಯವರು ಮಾಡಬೇಕೇ” ಎನ್ನುವವರು ಇನ್ನೊಂದು ಕಡೆ ಎಂದು ಟೀಕಿಸಿದೆ.
ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ದಲಿತ ಶಾಸಕನ ಮನೆಗೆ ಮತಾಂಧರು ಬೆಂಕಿ ಹಚ್ಚಿದಾಗ ಕಾಂಗ್ರೆಸ್ ಶಾಸಕನಿಗೆ ನ್ಯಾಯ ಒದಗಿಸಲಾಗಿಲ್ಲ. 2013 ರಲ್ಲಿ ಪರಮೇಶ್ವರ್ ಸಿಎಂ ಆಗಬೇಕಿತ್ತು. ದಲಿತರು ಸಿಎಂ ಆಗುವುದನ್ನು ಸಹಿಸದ ಕಾಂಗ್ರೆಸ್ ಕುತಂತ್ರದಿಂದ ಸೋಲಿಸಿರು ಎಂದು ಆರೋಪಿಸಲಾಗಿದೆ.
ನೆಹರೂ – ಗಾಂಧೀಜಿ ಸಮಕಾಲೀನರಾಗಿದ್ದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೀನಾಮಾನವಾಗಿ ನಡೆಸಿತು. ಅಂಬೇಡ್ಕರ್ ಅವರ ರಾಜಕೀಯ ಭವಿಷ್ಯವನ್ನು ನಿರ್ನಾಮ ಮಾಡಿದ ಕಾಂಗ್ರೆಸ್, ಅಂಬೇಡ್ಕರ್ ಅವರ ಅಂತಿಮ ಯಾತ್ರೆಗೆ ಅಡ್ಡಿ ಉಂಟು ಮಾಡಿತ್ತು. ಕಾಂಗ್ರೆಸ್ ಪಕ್ಷಕ್ಕೆ ದಲಿತರು ಕೇವಲ ಮತಬ್ಯಾಂಕ್ ಅಷ್ಟೇ ಎಂದು ಹೇಳಲಾಗಿದೆ.