5 ಕೆಜಿ ಗೋಧಿ ಕದ್ದ ಶಂಕೆಯ ಮೇಲೆ ಇಬ್ಬರು ಕೋಳಿ ಫಾರಂ ಮಾಲೀಕರು, ಮೂವರು ದಲಿತ ಹುಡುಗರನ್ನು ಥಳಿಸಿ ತಲೆ ಬೋಳಿಸಿ ಮೆರವಣಿಗೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಹ್ರೈಚ್ನ ಹಳ್ಳಿಯೊಂದರಲ್ಲಿ ನಡೆದಿದೆ.
ಬಹ್ರೈಚ್ ಜಿಲ್ಲೆಯ ನಾನ್ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್ಪುರ ಟೆಡಿಯಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು, 12-14 ವರ್ಷ ವಯಸ್ಸಿನ ಮೂವರು ಬಾಲಕರಿಗೆ ಥಳಿಸಿ, ತಲೆ ಬೋಳಿಸಿ ಮುಖಕ್ಕೆ ಕಪ್ಪು ಮಸಿ ಬಳಿದು, ಮುಂಗೈಗೆ ‘ಕಳ್ಳ’ ಎಂದು ಬರೆಸಿ, ಕೈ ಕಟ್ಟಿ ಗ್ರಾಮದಾದ್ಯಂತ ಮೆರವಣಿಗೆ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತರ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ನಾಲ್ವರು ಆರೋಪಿಗಳಾದ ನಜೀಮ್ ಖಾನ್, ಖಾಸಿಂ ಖಾನ್, ಇನಾಯತ್ ಮತ್ತು ಸಾನು ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆಯನ್ವಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಬುಧವಾರ ಪ್ರಕರಣ ದಾಖಲಿಸಲಾಗಿದೆ ಎಂದು ನನ್ಪಾರಾ ಎಸ್ಎಚ್ಒ ಪ್ರದೀಪ್ ಸಿಂಗ್ ತಿಳಿಸಿದ್ದಾರೆ.
ಗ್ರಾಮದ ಮಾಜಿ ಮುಖ್ಯಸ್ಥ ಸಾನು ತಲೆಮರೆಸಿಕೊಂಡಿದ್ದು, ಉಳಿದ ಮೂವರನ್ನು ಬಂಧಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ. ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸಾಕಷ್ಟು ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತರ ಕುಟುಂಬಗಳ ಪ್ರಕಾರ, ಕೆಲಸಕ್ಕಾಗಿ ಕೋಳಿ ಫಾರಂಗೆ ಹೋಗದ ಕಾರಣ ಆರೋಪಿಗಳು, ಹುಡುಗರಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಆರೋಪಿಗಳು ತಮ್ಮ ಮೊಬೈಲ್ನಲ್ಲಿ ಕೃತ್ಯವನ್ನು ಚಿತ್ರೀಕರಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.