![How Rs 10 drink helped Punjab Police nab 'Daaku Haseena' for Rs 8 cr robbery - India Today](https://akm-img-a-in.tosshub.com/indiatoday/images/story/202306/whatsapp_image_2023-06-18_at_23.08.06_2-sixteen_nine.jpeg?VersionId=gDm2xoxsc5jrzPjw5xTYHxKQQOMHERiQ&size=690:388)
8 ಕೋಟಿ 49 ಲಕ್ಷ ರೂಪಾಯಿ ದರೋಡೆ ಪ್ರಕರಣದಲ್ಲಿ ‘ಡಾಕು ಹಸೀನಾ’ ಎಂದು ಕರೆಯಲ್ಪಡುವ ಮನ್ದೀಪ್ ಕೌರ್ ಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಜೂನ್ 10 ರಂದು ಲೂಧಿಯಾನದಲ್ಲಿ ನಡೆದ 8 ಕೋಟಿ 49 ಲಕ್ಷ ರೂಪಾಯಿ ದರೋಡೆ ಪ್ರಕರಣದಲ್ಲಿ ‘ಡಾಕು ಹಸೀನಾ’ ಸಿಕ್ಕಿಬೀಳಲು ಸಹಾಯ ಮಾಡಿದ್ದು 10 ರೂ. ಮೌಲ್ಯದ ಪಾನೀಯ. ಮಂದೀಪ್ ಕೌರ್ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್ ಅವರನ್ನು ಉತ್ತರಾಖಂಡದ ಚಮೋಲಿಯ ಹೇಮಕುಂಡ್ ಸಾಹಿಬ್‌ನಲ್ಲಿ ಬಂಧಿಸಲಾಗಿದೆ.
ದರೋಡೆಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ನಮಿಸಲು ಅವರು ಸಿಖ್ ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ದಂಪತಿಯ ಹೊರತಾಗಿ ಪಂಜಾಬ್‌ನ ಗಿಡ್ಡರ್‌ಬಾಹಾದಿಂದ ಮತ್ತೊಬ್ಬ ಆರೋಪಿ ಗೌರವ್ ಎಂಬಾತನನ್ನೂ ಪೊಲೀಸರು ಹಿಡಿದಿದ್ದಾರೆ. ಇದುವರೆಗೆ ಪ್ರಕರಣದ ಆರೋಪಿಗಳಾಗಿರುವ 12 ಜನರ ಪೈಕಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಹಾಕಿದ 10 ರೂ. ಡ್ರಿಂಕ್ ಆಮಿಷಕ್ಕೆ ಬಿದ್ದ ದಂಪತಿಯಿಂದ 21 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಮಂದೀಪ್ ಕೌರ್ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್ ನೇಪಾಳಕ್ಕೆ ಪಲಾಯನ ಮಾಡಲು ಯೋಜಿಸಿದ್ದರು ಎಂದು ಪಂಜಾಬ್ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಆದರೆ ಅದಕ್ಕೂ ಮೊದಲು ಅವರು ಹರಿದ್ವಾರ, ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಯೋಜನೆ ಪೊಲೀಸರಿಗೆ ಗೊತ್ತಾಯಿತು. ಉತ್ತರಾಖಂಡದ ಸಿಖ್ ದೇಗುಲಕ್ಕೆ ಭೇಟಿ ನೀಡುತ್ತಿದ್ದ ಅಪಾರ ಸಂಖ್ಯೆಯ ಭಕ್ತರಲ್ಲಿ ಅವರಿಬ್ಬರನ್ನು ಗುರುತಿಸುವುದು ಕಷ್ಟಕರವಾಗಿತ್ತು. ಹಾಗಾಗಿ ಯಾತ್ರಾರ್ಥಿಗಳಿಗೆ ಉಚಿತ ಪಾನೀಯ ಸೇವೆಯನ್ನು ಹಮ್ಮಿಕೊಳ್ಳಲು ಪೊಲೀಸರು ಯೋಜಿಸಿ ಮುಂದಾದರು.
ಈ ವೇಳೆ ಆರೋಪಿ ದಂಪತಿ ಡ್ರಿಂಕ್ ಸ್ಟಾಲ್ ಬಳಿ ಬಂದಿದ್ದಾರೆ. ಸಿಕ್ಕಿಹಾಕಿಕೊಳ್ಳದಿರಲು ಅವರು ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು. ಆದರೆ ಪಾನೀಯ ಸೇವಿಸಲು ತಮ್ಮ ಮುಖದ ಮೇಲೆ ಹಾಕಿಕೊಂಡಿದ್ದ ಬಟ್ಟೆಯನ್ನು ತೆಗೆಯಬೇಕಾಗಿತ್ತು. ಈ ವೇಳೆ ಪೊಲೀಸರು ಅವರನ್ನು ಗುರುತಿಸಿ ದಂಪತಿಯನ್ನು ಬೆನ್ನಟ್ಟಿ ಬಂಧಿಸಿದ್ದಾರೆ.
ಲೂಧಿಯಾನದಲ್ಲಿ 8.49 ಕೋಟಿ ರೂ. ದರೋಡೆಯ ಹಿಂದಿನ ಆರೋಪಿಗಳ ಪೈಕಿ ಡಾಕು ಹಸೀನಾ ಎಂದು ಕರೆಯಲ್ಪಡುವ ಮಂದೀಪ್ ಕೌರ್ ಒಬ್ಬಳು.