ಮಂಗಳೂರು: ಕಾಡಿನಲ್ಲಿ ಸಿಗುವ ಮೈರೋಲ್ ಹಣ್ಣು ಎಂದು ಭಾವಿಸಿ ವಿಷಕಾರಿ ಹಣ್ಣಿನ ಜ್ಯೂಸ್ ಕುಡಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶೇಣಿ ಗ್ರಾಮದಲ್ಲಿ ನಡೆದಿದೆ.
ಶೇಣಿ ಬಳಿಯ ಕುಳ್ಳಾಜೆ ನಿವಾಸಿ 35 ವರ್ಷದ ಲೀಲಾವತಿ ಮೃತ ಮಹಿಳೆ. ವಾರದ ಹಿಂದೆ ಲೀಲಾವತಿ ತಂದೆ ಮೈರೋಲ್ ಹಣ್ಣು ತಂದು ಜ್ಯೂಸ್ ಮಾಡಿ ಸೇವಿಸಿದ್ದರು. ಲೀಲಾವತಿ ಕೂಡ ಮೈರೋಲ್ ಹಣ್ಣು ಎಂದು ಭಾವಿಸಿ ಹಣ್ಣೊಂದರ ಜ್ಯೂಸ್ ಮಾಡಿ ಸೇವಿಸಿದ್ದಾರೆ. ಜ್ಯೂಸ್ ಕುಡಿದ ಬಳಿಕ ಲೀಲಾವತಿಗೆ ವಾಂತಿ-ಭೇದಿಯಾಗಿ ಅಸ್ವಸ್ಥರಾಗಿದ್ದಾರೆ.
ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದ ಲೀಲಾವತಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಕಾಡಿನಲ್ಲಿ ಕಂಡುಬರುವ ಹಣ್ಣು ಮೈರೋಲ್ ಹಣ್ಣು. ಮೈರೋಲ್ ಹಣ್ಣು ಎಂದು ತಿಳಿದು ಬೇರೆ ವಿಷಕಾರಿ ಹಣ್ಣನ್ನು ಲೀಲಾವತಿ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಲೀಲಾವತಿ ಸಾವನ್ನಪ್ಪಿರಬಹುದು ಎನ್ನಲಾಗಿದೆ.