ಮಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ವರುಣಾರ್ಭಟ ಜೋರಾಗಿದ್ದು, ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ರಣಭೀಕರ ಮಳೆಯಿಂದಾಗಿ ಸಾವು-ನೋವುಗಳು ಸಂಭವಿಸುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಮಳೆ ಅವಾಂತರಕ್ಕೆ 7 ಜನರು ಬಲಿಯಾಗಿದ್ದಾರೆ. ಉಳ್ಳಾಲ ತಾಲೂಕಿನ ಕುತ್ತಾರುವಿನ ಮದನಿನಗರದಲ್ಲಿ ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮಂಗಳೂರಿನ ರೊಸಾರಿಯೋ ಶಾಲೆ ಹಿಂಭಾಗ ವಿದ್ಯುತ್ ತಂತಿ ತುಳಿದು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಬೆಳ್ತಂಗಡಿಯ ಶಿಬಾಬೆ ಗ್ರಾಮದಲ್ಲಿ ಮಳೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿ 20 ವರ್ಷದ ಯುವತಿ ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಮಳೆ ಹಾಗೂ ಮಳೆ ಅವಾಂತರಗಳು ಮುಂದುವರೆದಿದ್ದು, ಮುಂಜಾಗೃತಾ ಕ್ರಮವಾಗಿ ಇಂದೂ ಕೂಡ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಇಂದು ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಜನ ಜೀವನ ಸಂಪೂರ್ನ ಅಸ್ತವ್ಯಸ್ತವಾಗಿದೆ.