ಮಂಗಳೂರು: ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಕರಾವಳಿ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷವಾಗಿದ್ದು, ಪೊಲಿಸ್ ಹಾಗೂ ಎ ಎನ್ ಎಫ್ ತಂಡದಿಂದ ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿ ಅರಣ್ಯದಂಚಿನ ಮನೆಗೆ 6 ಜನರ ನಕ್ಸಲರ ತಂಡ ಭೇಟಿ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲರೂ ಒಂದೇ ತರಹದ ಡ್ರೆಸ್, ಬೂಟು, ದೊಡ್ಡ ಬ್ಯಾಗ್ ಗಳನ್ನು ಧರಿಸಿದ್ದರು. ಅವರ ಬಳಿ ಗನ್ ನಂತಹ ಸಾಧನಗಳು ಇದ್ದವು ಎಂದು ಮನೆ ಸದಸ್ಯರು ತಿಳಿಸಿದ್ದಾರೆ.
ಶಂಕಿತ ನಕ್ಸಲರಲ್ಲಿ ಕೆಲವರು ಮನೆಯೊಳಗೆ ನುಗ್ಗಿ ಅಲ್ಲಿದ್ದ ಲೈಟ್ ಗಳನ್ನು ಆಫ್ ಮಾಡಿ ಮನೆಯಲ್ಲಿದ್ದವರಿಗೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಲು ಹೇಳಿದ್ದಾರೆ. ಬಳಿಕ ಟಿವಿ ಸೌಂಡ್ ಹೆಚ್ಚಿಸಿದ್ದಾರೆ. ನಾಲ್ವರು ಮನೆಯ ಹೊರ ಭಾಗದಲ್ಲಿ ಕಾವಲು ನಿಂತಿದ್ದರು. ಊಟ ಸಿದ್ಧಪಡಿಸಿಕೊಡುವಂತೆ ಹೇಳಿ ಊಟ ಸೇವಿಸಿದ್ದಾರೆ. ಬಳಿಕ ಮನೆಯಲ್ಲಿದ್ದ ದಿನಸಿ ಸಾಮಾನುಗಳನ್ನು ತೆಗೆದುಕೊಂಡು, ಮನೆಯಲ್ಲಿ ಮೊಬೈಲ್ ಫೋನ್ ಗಳನ್ನು, ಲ್ಯಾಪ್ ಟಾಪ್ ಗಳನ್ನು ಚಾರ್ಜ್ ಮಾಡಿಕೊಂಡು ಕಾಡಿನತ್ತ ಹೊರಟಿದ್ದಾರೆ. ನಕ್ಸಲರ ತಂಡದಲ್ಲಿದ್ದವರು ಕನ್ನಡ, ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಮನೆಯ ಸದಸ್ಯರು ಮಾಹಿತಿ ನೀಡಿದ್ದಾರೆ.
ನಕ್ಸಲರ ಭೇಟಿ ಸುಳಿವು ಬೆನ್ನಲ್ಲೇ ನಕ್ಸಲ್ ನಿಗ್ರಹ ಪಡೆ ಹಾಗೂ ಪೊಲೀಸರು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಸುಬ್ರಹ್ಮಣ್ಯ ಗುಂಡ್ಯ ಹೆದ್ದಾರಿ ಬಳಿ ಅರಣ್ಯದಂಚಿನಲ್ಲಿ ಶೋಧಕಾರ್ಯ ಚುರುಕುಗೊಂಡಿದೆ.