ಮಂಗಳೂರು: ಸ್ವಿಫ್ಟ್ ಕಾರಿನಲ್ಲಿ ನಾಲ್ಕು ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು, ಕಾರನ್ನು ತಡೆದು ಗೋವುಗಳನ್ನು ರಕ್ಷಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದ ಪದ್ಮಡ್ಕ ಎಂಬಲ್ಲಿ ನಡೆದಿದೆ.
ತಡರಾತ್ರಿ ಕೆಲ ದುಷ್ಕರ್ಮಿಗಳು ಗೋವುಗಳಿಗೆ ಹಿಂಸಿಸಿ ಕಾರಿನಲ್ಲಿ ಸಾಗಿಸುತ್ತಿದ್ದರು. ವಿಚಾರ ತಿಳಿಯುತ್ತಿದ್ದಂತೆ ಬಜರಂಗದಳ ಕಾರ್ಯಕರ್ತರು ಕಾರನ್ನು ತಡೆದಿದ್ದಾರೆ. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.
ಖದೀಮರು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋವುಗಳ ಸಹಿತ ಕಾರನ್ನು ವಶಕ್ಕೆ ಪಡೆಯಲಾಗಿದೆ.