ಮಂಗಳೂರು: ‘ಕಾಂತಾರಾ’ ಸಿನಿಮಾ ಬಳಿಕ ತುಳುನಾಡಿನ ಧಾರ್ಮಿಕ ಆಚರಣೆ ದೈವಾರಾಧನೆ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಇದೀಗ ದೈವಾರಾಧನೆ ಪ್ರದರ್ಶನ ಸೀರಿಯಲ್ ಗಳಿಗೂ ವ್ಯಾಪಿಸಿದ್ದು, ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ದೈವಾರಾಧಾಕರ ರೀತಿ ವೇಷ ಭೂಷಣಗಳನ್ನು ತೊಟ್ಟು ಅಭಿನಯಿಸುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಇದೀಗ ಧಾರಾವಾಹಿಯಲ್ಲಿಯೂ ದೈವಾರಾಧನೆ ಪ್ರದರ್ಶನ ಕಂಡುಬರುತ್ತಿದೆ. ಇದು ತುಳುನಾಡಿನ ವೈಶಿಷ್ಟ್ಯ ಹಾಗೂ ಧಾರ್ಮಿಕ ಆಚರಣೆಗೆ ಧಕ್ಕೆಯಾಗುತ್ತಿದೆ ಎಂದು ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ ದೈವಕೋಲ ಪ್ರದರ್ಶನದ ಪ್ರೋಮೋ ಪ್ರಸಾರವಾಗಿದೆ. ಕಲಾವಿದರು ದೈವದಂತೆ ವೇಷ ಭೂಷಣ ತೊಟ್ಟು ನಟಿಸಿದ್ದಾರೆ. ಇದರಿಂದ ಗರಂ ಆಗಿರುವ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಂಗಳೂರಿನ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಪಾಂಡವೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಧಾರಾವಾಹಿ ಕಲಾವಿದ ಮಂಗಳೂರಿನ ಪ್ರಶಾಂತ್ ಸಿ.ಕೆ ಹಾಗೂ ನಿರ್ದೇಶಕರ ವಿರುದ್ಧವೂ ದೂರು ನೀಡಲು ಮುಂದಾಗಿದ್ದಾರೆ. ಧಾರಾವಾಹಿಯಲ್ಲಿ ದೈವಕೋಲ ಪ್ರದರ್ಶನ ಮಾಡದಂತೆ ತಡೆ ನೀಡಲು ಒತ್ತಾಯಿಸಿದ್ದಾರೆ.