ಬರಗಾಲದ ಹೊತ್ತಲ್ಲಿ ಹೈನುಗಾರರಿಗೆ ಬರೆ ಎಳೆಯಲಾಗಿದೆ. ಪಶು ಆಹಾರ ದರ ಮತ್ತಷ್ಟು ದುಬಾರಿಯಾಗಿದೆ. ಹಾಲಿನ ಸಹಾಯ ಧನ ಸ್ಥಗಿತಗೊಳಿಸಿ ಹಾಲಿನ ದರ ಇಳಿಕೆ ಮಾಡಿದ್ದ ಕೆಎಂಎಫ್ ಪಶು ಆಹಾರ ದರವನ್ನು ಪ್ರತಿ ಮೆಟ್ರಿಕ್ ಟನ್ ಗೆ 500 ರೂ. ಹೆಚ್ಚಳ ಮಾಡಿದ್ದು, ಹೈನುಗಾರರಿಗೆ ಬರೆ ಎಳೆದಿದೆ.
ಫೆಬ್ರವರಿ 20 ರಿಂದ ಅನ್ವಯವಾಗುವಂತೆ ಪಶು ಆಹಾರ ಮಾರಾಟ ದರ ಪರಿಷ್ಕರಿಸಲಾಗಿದೆ. ಪಶು ಆಹಾರ ಉತ್ಪಾದನೆಗೆ ಬೇಕಾಗುವ ಕಚ್ಚಾ ಪದಾರ್ಥಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಿರುವುದಾಗಿ ಹೇಳಲಾಗಿದ್ದು, ಬರಗಾಲದ ಸಂದರ್ಭದಲ್ಲಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬರಗಾಲದಿಂದಾಗಿ ರಾಜ್ಯದ 235 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಬೆಳೆ ಕಳೆದುಕೊಂಡ ರೈತರು ಸಂಕಷ್ಟದಲ್ಲಿದ್ದು, ಹೈನುಗಾರಿಕೆ ನಂಬಿಕೆ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದಿಂದ ಹಾಲಿಗೆ ನೀಡುತ್ತಿದ್ದ 5 ರೂ. ಸಹಾಯಧನ ಸ್ಥಗಿತಗೊಳಿಸಲಾಗಿದೆ. ಹಾಲಿನ ಖರೀದಿ ದರವನ್ನು ಎರಡು ರೂಪಾಯಿ ಕಡಿತಗೊಳಿಸಲಾಗಿದೆ. ಈಗ ಪಶು ಆಹಾರದ ಮೇಲಿನ ದರವನ್ನು ಪ್ರತಿ ಮೆ. ಟನ್ ಗೆ 500 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಮೊದಲೇ ಸಂಕಷ್ಟದಲ್ಲಿದ್ದ ರೈತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ನಂದಿನಿ ಪಶು ಆಹಾರ ದರ 50 ಕೆಜಿಗೆ 1100 ರೂ. ಇದ್ದು 1,256 ರೂ.ಗೆ ಹೆಚ್ಚಳ ಆಗಿದೆ. ಸಂಘ ಮತ್ತು ಕಾರ್ಯದರ್ಶಿ ಪ್ರೋತ್ಸಾಹ ಧನ ಸೇರಿ 1,266 ರೂ.ಗೆ ಮಾರಾಟ ಮಾಡಲು ಸಂಘಗಳಿಗೆ ಸೂಚನೆ ನೀಡಲಾಗಿದೆ. ಗೋಧಿ ಬೂಸಾ 50 ಕೆಜಿ ಚೀಲಕ್ಕೆ 1,500 ರೂ.ಗೆ ತಲುಪಿದೆ. ಈ ದರ 100 ರಿಂದ 150 ರೂಪಾಯಿ ಹೆಚ್ಚಳವಾಗಬಹುದು. ಹತ್ತಿಕಾಳು ಹಿಂಡಿ 50 ಕೆಜಿ ಚೀಲಕ್ಕೆ 1,700 ರೂ. ಮಾರಾಟವಾಗುತ್ತಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ನಂದಿನಿ ಬೈಪಾಸ್ ಪಶು ಆಹಾರ ದರ 50 ಕೆಜಿ ಚೀಲಕ್ಕೆ 1,352 ರಿಂದ 1378 ರೂಪಾಯಿಗೆ ಹೆಚ್ಚಳ ಆಗಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.