ಬೆಂಗಳೂರು: ಬಿಜೆಪಿಯ ಜಿಲ್ಲಾಧ್ಯಕ್ಷರು ನಿತ್ಯ ಕನಿಷ್ಠ 5 ಗಂಟೆ ಸಮಯವನ್ನು ಪಕ್ಷದ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ನೇಮಕವಾದ ಬಿಜೆಪಿ 39 ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರೊಂದಿಗೆ ವಿಡಿಯೋ ಸಂವಾದ ನಡೆಸಿದ ವಿಜಯೇಂದ್ರ, ಸಂಘಟನೆಯ ಬಲವರ್ಧನೆ, ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ.
ಜಿಲ್ಲಾಧ್ಯಕ್ಷರು ನಿತ್ಯ ಕನಿಷ್ಠ 5 ಗಂಟೆ ಕಾಲ ಪಕ್ಷದ ಕಾರ್ಯ ಚಟುವಟಿಕೆಗೆ ಸಮಯ ಮೀಸಲಿಡಬೇಕು. ವಾರದಲ್ಲಿ ಕನಿಷ್ಠ 300 ಕಿಲೋ ಮೀಟರ್ ನಷ್ಟು ಸಂಘಟನಾ ಪ್ರಯಾಣ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಪಕ್ಷದ ಕಾರ್ಯಾಲಯಕ್ಕೆ ಬಂದು ಹೋಗುವುದು ಸಂಘಟನಾ ಪ್ರಯಾಣವೆನಿಸಿಕೊಳ್ಳುವುದಿಲ್ಲ. ಜಿಲ್ಲಾದ್ಯಂತ ಪ್ರವಾಸ ನಡೆಸಿ ಸಂಘಟನಾ ಸಭೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಕ್ಷದ ಬಲ ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ.