ಬೆಂಗಳೂರು: ಕಳೆದ ಜನವರಿ 1 ರಿಂದ ಬಾಕಿ ಇರುವ ತುಟ್ಟಿ ಭತ್ಯೆಯನ್ನು ನಗದು ರೂಪದಲ್ಲಿ ಸರ್ಕಾರಿ ನೌಕರರಿಗೆ ಬಿಡುಗಡೆ ಮಾಡುವಂತೆ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಡಾಕ್ಷರಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಪತ್ರ ಬರೆದಿರುವ ಅವರು ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಬಾಕಿ ಇದ್ದ ತುಟ್ಟಿ ಭತ್ಯೆಯನ್ನು ಪೂರ್ವಾನ್ವಯವಾಗಿ ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಜನವರಿ 1ರಿಂದ ಜಾರಿಗೆ ಬರುವಂತೆ ಶೇಕಡ 4ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಶೇ. 4 ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಲು ನೌಕರರ ಸಂಘದಿಂದ ಈ ಮೊದಲು ಮನವಿ ಮಾಡಲಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಪ್ರಸ್ತಾಪ ತಡೆ ಹಿಡಿಯಲಾಗಿತ್ತು. ಈಗ ನಗದು ರೂಪದಲ್ಲಿ ಡಿಎ ಬಿಡುಗಡೆ ಮಾಡಬೇಕೆಂದು ಕೋರಲಾಗಿದೆ.