ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಡಿ.ವಿ.ಸದಾನಂದಗೌಡಗೆ ಟಿಕೆಟ್ ಕೈತಪ್ಪಿದ್ದು, ಪಕ್ಷದ ವಿರುದ್ಧ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ನಾಯಕರು ಡಿ.ವಿ.ಸದಾನಂದಗೌಡರನ್ನು ಸಂಪರ್ಕಿಸುತ್ತಿದ್ದು, ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಸಿಎಂ ಸದಾನಂದಗೌಡ ಕಾಂಗ್ರೆಸ್ ನತ್ತ ಮುಖಮಾಡಲಿದ್ದಾರಾ? ಎಂಬ ಚರ್ಚೆ ಕೂಡ ಆರಂಭವಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಿ.ಸದಾನಂದಗೌಡ, ವಿವಿಧ ರಾಜಕೀಯ ಪಕ್ಷಗಳ ನಾಯಕರು ನನ್ನನ್ನು ಸಂಪರ್ಕ ಮಾಡುತ್ತಿದ್ದಾರೆ. ಬೇರೆ ಬೇರೆ ಸಂಗತಿಗಳು ನಡೆಯುತ್ತಿವೆ. ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು ಸಮಾಧಾನವನ್ನೂ ಮಾಡಿದ್ದಾರೆ. ಆದರೆ ನನ್ನ ಮುಂದಿನ ರಾಜಕೀಯ ನಡೆ ಬಗ್ಗೆ ನನ್ನ ಕುಟುಂಬದ ಜೊತೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದಿದ್ದಾರೆ.
ದೆಹಲಿಯಲ್ಲಿ, ರಾಜ್ಯದಲ್ಲಿ ಒಂದಿಷ್ಟು ವಿದ್ಯಮಾನ ನಡೆದಿದೆ. ನನಗೆ ಟಿಕೆಟ್ ಕೊಡುವುದಾಗಿ ಹೇಳಿದ್ದರು. ಆದರೆ ಕೊನೆಕ್ಷಣದಲ್ಲಿ ರಕ್ಷಣಗೆ ಬರಲಿಲ್ಲ. ಇಂದು ನನ್ನ ಹುಟ್ಟಿದಹಬ್ಬ. ಹಾಗಾಗಿ ಇಡೀ ದಿನ ನನ್ನ ಕುಟುಂಬದ ಜೊತೆ ಕಳೆಯುತ್ತೇನೆ. ಕುಟುಂಬದ ಜೊತೆ ಹಾಗೂ ಬೆಂಬಲಿಗರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ನನ್ನ ರಾಜಕೀಯದ ಮುಂದಿನ ನಡೆ ಬಗ್ಗೆ ನಾಳೆ ಸುದ್ದಿಗೋಷ್ಠಿ ನಡೆಸಿ ತಿಳಿಸುತ್ತೇನೆ ಎಂದು ಹೇಳಿದರು. ಇನ್ನು ಈಶ್ವರಪ್ಪ ಅವರನ್ನು ನಾನು ಭೇಟಿಯಾಗಿ ಮಾತನಾಡಿದ್ದೇನೆ. ಪಕ್ಷದಲ್ಲಿ ಯಾರಿಗೆಲ್ಲ ನೋವಾಗಿದೆ ಎಲ್ಲರೂ ಒಟ್ಟಿಗೆ ಹೋಗಿ ವರಿಷ್ಠರ ಬಳಿ ಚರ್ಚಿಸೋಣ ಎಂದಿದ್ದೆ. ಆದರೆ ಈಶ್ವರಪ್ಪ ತಮ್ಮದೇ ಆದ ನಿರ್ಣಯ ಕೈಗೊಂಡಿದ್ದಾರೆ. ಅದರ ಬಗ್ಗೆ ಹೆಚ್ಚಿಗೆ ಮಾತನಾಡಲ್ಲ ಎಂದರು.