ಬೆಂಗಳೂರು: ಸ್ವಪಕ್ಷದ ನಾಯಕರ ವಿರುದ್ಧವೇ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರವಾಗಿ ಕಿಡಿಕಾರಿರುವ ಮಾಜಿ ಸಿಎಂ, ಸಂಸದ ಡಿ.ವಿ.ಸದಾನಂದಗೌಡ, ಬಾಯಿಗೆ ಬಂದಂತೆ ಮಾತನಾಡುವವರ ಬಾಯಿಗೆ ಬೀಗಹಾಕಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಿ.ಸದಾನಂದಗೌಡ, ಅಶಿಸ್ತು ಅಂತಾ ಗೊತ್ತಿದ್ದರೂ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ರಾಜ್ಯ ನಾಯಕರಿಗೆ ತಾಕತ್ ಇಲ್ಲದ ಸ್ಥಿತಿ ಎಂಬಂತಾಗಿದೆ ಎಂದು ಹೇಳುವ ಮೂಲಕ ಬೇಸರ ವ್ಯಕ್ತಪಡಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಡಝನ್ ಗಟ್ಟಲೇ ನಾಯಕರು ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಜನಾರ್ಧನರೆಡ್ಡಿ ಕೂಡ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದರು. ಆಗ ನಾನು ಒಂದೇ ಗಂಟೆಯಲ್ಲಿ ಅವರಿಗೆ ನೋಟಿಸ್ ಕೊಟ್ಟು ಸಸ್ಪೆಂಡ್ ಮಾಡಿದ್ದೆ. ಆಗ ಯಡಿಯೂರಪ್ಪನವರು ಒತ್ತಡ ಹಾಕಿ ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
ರೇಣುಕಾಚಾರ್ಯ ಅವರನ್ನು ಸಸ್ಪೆಂಡ್ ಮಾಡಿದಾಗ ಸಿದ್ದೇಶ್ವರ ಅವರು ನನ್ನ ಬಳಿ ಬಂದು ಹೇಳಿದ್ದರು, ಯಡಿಯೂರಪ್ಪನವರೂ ಹೇಳಿದ್ದರಿಂದ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದ್ದೆವು. ಈಗ ಹಲವು ನಾಯಕರು ಪಕ್ಷದ ವಿರುದ್ಧ ಮಾತನಾಡುತ್ತಿದ್ದರೂ ಯಾಕೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.