ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಐಪಿಎಸ್ ಅಧಿಕಾರಿ ಡಿ. ರೂಪಾ ಹಿಂಪಡೆದಿದ್ದಾರೆ.
ಮಾನನಷ್ಟ ಕೇಸ್ ರದ್ದುಗೊಳಿಸುವಂತೆ ರೂಪಾ ಅರ್ಜಿ ಸಲ್ಲಿಸಿದ್ದರು. ಡಿ. ರೂಪಾ ಅವರ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕೇಸು ದಾಖಲಿಸಿದ್ದರು. ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಡಿ. ರೂಪಾ ಆರೋಪ ಮಾಡಿದ್ದರು. ಹೀಗಾಗಿ ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಸುಪ್ರೀಂ ಕೋರ್ಟ್ ನಲ್ಲಿ ಇಂದಿನ ವಿಚಾರಣೆಯ ವೇಳೆ ಇಬ್ಬರೂ ಮಹಿಳಾ ಅಧಿಕಾರಿಗಳು ಹಾಜರಿದ್ದರು. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣದ ಇತ್ಯರ್ಥಕ್ಕೆ ಮಧ್ಯವರ್ತಿಗಳ ನೇಮಿಸುವಂತೆ ಡಿ. ರೂಪಾ ಮನವಿ ಮಾಡಿದ್ದಾರೆ. ಆದರೆ, ಮಧ್ಯಸ್ಥಿಕೆಗೆ ಐಪಿಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಒಪ್ಪಿಕೊಂಡಿಲ್ಲ. ಕೋರ್ಟಿನಲ್ಲಿಯೇ ತೀರ್ಮಾನವಾಗಲಿ ಎಂದು ಪಟ್ಟು ಹಿಡಿದಿದ್ದಾರೆ.
ಹಿರಿಯ ಅಧಿಕಾರಿಗಳಾಗಿ ಹೀಗೆ ಕಿತ್ತಾಡುವುದು ಆರೋಗ್ಯಕರವಲ್ಲ, ಮಧ್ಯಸ್ಥಿಕೆಗೆ ಒಪ್ಪದೆ ಇದ್ರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಪ್ರಕರಣದ ಅರ್ಹತೆಯ ಮೇಲೆ ನಾವು ನಿರ್ಧರಿಸಬೇಕಾಗುತ್ತದೆ. ಇಬ್ಬರು ನ್ಯಾಯಾಲಯದಲ್ಲಿದ್ದೀರಿ. ದಯವಿಟ್ಟು ಸೂಚನೆಗಳನ್ನು ತೆಗೆದುಕೊಳ್ಳಿ ಎಂದು ತಿಳಿಸಿದೆ.
ಇಬ್ಬರೂ ಪರಸ್ಪರ ಮುಖಾಮುಖಿಯಾಗಿ ಮಾತನಾಡಬಹುದೇ ಇಬ್ಬರ ಪರ ವಕೀಲರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಕೇಳಿದ್ದಾರೆ. ಮುಖಾಮುಖಿ ಚರ್ಚೆಗೆ ಐಪಿಎಸ್ ಅಧಿಕಾರಿ ಡಿ. ರೂಪಾ ಒಪ್ಪಿದ ಹಿನ್ನೆಲೆ ಚರ್ಚೆಗೆ ಸಮಯ ನೀಡಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೆಲಕಾಲ ಮುಂದೂಡಿದೆ. ಇಬ್ಬರೂ ಮಾತುಕತೆ ನಡೆಸಿದ ಬಳಿಕ ಮತ್ತೆ ವಿಚಾರಣೆ ಆರಂಭಿಸಲಾಗಿದೆ. ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೂಪಾ ಹೇಳಿದ್ದಾರೆ.
ಯಾಕೆ ಸಮಯ ವ್ಯರ್ಥವಾಯಿತು? ಏನು ಸಮಸ್ಯೆ ಎಂದು ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ. ನಾನು ಬೇಷರತ್ ಕ್ಷಮೆಯಾಚಿಸಬೇಕು ಎಂದು ಸಿಂಧೂರಿ ಕೇಳುತ್ತಿದ್ದಾರೆ ಎಂದು ರೂಪಾ ತಿಳಿಸಿದ್ದಾರೆ. ಬೇಷರತ್ ಕ್ಷಮೆ ಕೇಳುವಂತೆ ಹೇಳುತ್ತಿದ್ದೇವೆ ಎಂದ ಸಿಂಧೂರಿ ಪರ ವಕೀಲರು ಹೇಳಿದ್ದು, ಹಾಗಾದರೆ ಕ್ಷಮೆ ಕೇಳಬಹುದಲ್ಲ, ಇದು ಸರಿಯಾದ ಮಾರ್ಗ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇದಕ್ಕೆ ಒಪ್ಪದೇ ಪರಸ್ಪರ ಕ್ಷಮೆ ಅಗತ್ಯವಿದೆ ಎಂದು ಐಪಿಎಸ್ ಅಧಿಕಾರಿ ರೂಪಾ ಹೇಳಿದ್ದಾರೆ. ನ್ಯಾಯಮೂರ್ತಿಗಳ ಮನವಿಗೂ ಡಿ. ರೂಪಾ ಮತ್ತು ರೋಹಿಣಿ ಸಿಂಧೂರಿ ಒಪ್ಪಿಕೊಂಡಿಲ್ಲ. ವಿಚಾರಣಾಧೀನ ಕೋರ್ಟಿನಲ್ಲಿಯೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಹೀಗಾಗಿ ತಾವು ಸಲ್ಲಿಸಿದ ಅರ್ಜಿಯನ್ನು ಐಪಿಎಸ್ ಅಧಿಕಾರಿ ರೂಪ ಹಿಂಪಡೆದುಕೊಂಡಿದ್ದಾರೆ. ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಅವರು ಅರ್ಜಿ ಸಲ್ಲಿಸಿದ್ದರು.