ನವದೆಹಲಿ: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಅಲ್ಲದೇ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಮಹತ್ವದ ಸೂಚನೆಯನ್ನು ನೀಡಿದೆ.
ಇಬ್ಬರು ಮಹಿಳಾ ಅಧಿಕಾರಿಗಳ ಕಲಹ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ವೇಳೆ ರೋಹಿಣಿ ಸಿಂಧೂರಿ, ಡಿ.ರೂಪಾ ತನ್ನ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ಪೋಸ್ಟ್ ಗಳನ್ನು ತೆಗೆಯುವುದು ಮಾತ್ರವಲ್ಲ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಿ.ರೂಪಾ ಪರ ವಕೀಲರು ರೋಹಿಣಿ ಸಿಂಧೂರಿ ಕೂಡ ಅವಹೇಳನಕಾರಿ ಮಾತನಾಡಿದ್ದಾರೆ. ಡಿ.ರೂಪಾ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೋಹಿಣಿ ಸಿಂಧೂರಿ ಪರ ವಕೀಲರು, ಬುದ್ಧಿ ಭ್ರಮಣೆಯಾದವರು ಈ ರೀತಿ ಪೋಸ್ಟ್ ಮಾಡ್ತಾರೆ ಎಂದು ಹೇಳಿದ್ದಾರೆ ಹೊರತು ನೇರವಾಗಿ ಅವರಿಗೆ ಬುದ್ದಿ ಭ್ರಮಣೆಯಾಗಿದೆ ಎಂದಿಲ್ಲ ಎಂದು ವಾದ ಮಂಡಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ನ್ಯಾ.ಎ.ಎಸ್.ಓಕಾ, ಇಬ್ಬರೂ ಅಧಿಕಾರಿಗಳು ಕೆಲ ವಿಷಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಇಬ್ಬರೂ ಅಧಿಕಾರಿಗಳು. ಉತ್ತಮ ಭವಿಷ್ಯವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಧೂರಿ ಪರ ವಕೀಲರು, ಇಬ್ಬರಿಗೂ ಭವಿಷ್ಯವಿರಬಹುದು ಆದರೆ ಈಗ ಮಾಡಿರುವ ಆರೋಪದ ಬಗ್ಗೆ ಜನ ಬೇರೆ ಬೇರೆ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಮೌನವಾಗಿರಲು ಸಾಧ್ಯವಿಲ್ಲ. ಡಿ.ರೂಪಾ ಬೇಷರತ್ ಕ್ಷಮೆಯಾಚಿಸಲಿ ಎಂದಿದ್ದಾರೆ.
ಬಳಿಕ ನ್ಯಾಯಮೂರ್ತಿ ಎ.ಎಸ್.ಓಕಾ, ಈಗಾಗಲೇ ನೀಡಿರುವ ಮಧ್ಯಂತರ ಆದೇಶ ಮುಂದುವರಿಸುವಂತೆ ಸೂಚಿಸಿ, ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿದರು.