ನವದೆಹಲಿ: ಪ್ರಜಾಪ್ರಭುತ್ವದ ದೇವಾಲಯ ಸಂಸತ್ ಭವನದ ಒಳಗೆ ಕೆಲವರು ದಾಳಿ ನಡೆಸಿದ್ದಾರೆ. ಭದ್ರತಾ ಲೋಪದ ಬಗ್ಗೆ ಪ್ರಧಾನಿ ಮೋದಿಯವರು, ಕೇಂದ್ರ ಗೃಹ ಸಚಿವರು ಉತ್ತರ ನೀಡಬೇಕು ಎಂದು ಆಗ್ರಹಿಸಿ, ಪ್ರತಿಭಟನೆ ಮಾಡಿದ್ದಕ್ಕೆ ವಿಪಕ್ಷ ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಸಂಸತ್ ನಲ್ಲಿ ಭದ್ರತಾ ಲೋಪವಾಗಿದೆ. ಪಾಸ್ ನೀಡಿದವರನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದೇವೆ. ಭದ್ರತಾ ಲೋಪದ ಬಗ್ಗೆ ಪ್ರಧಾನಿ ಮೋದಿಯವರು, ಅಮಿತ್ ಶಾ ಅವರು ಮಾತನಾಡುವಂತೆ ಆಗ್ರಹಿಸಿದ್ದೇವೆ. ಇಲ್ಲಿ ಸಂಸದರಿಗೆ ರಕ್ಷಣೆ ಇಲ್ಲ, ಇನ್ನು ಬೇರೆಯವರಿಗೆ ಏನು ರಕ್ಷಣೆ ಕೊಡ್ತೀರಿ? ಎಂದು ಪ್ರಶ್ನಿಸಿದ್ದೇವೆ. ಅದಕ್ಕೆ ನಿಯಮಗಳನ್ನು ಗಾಳಿಗೆ ತೂರಿ ನಮ್ಮನ್ನು ಅಮಾನತು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆ ಮಾಡುವುದು, ಮಾತನಾಡುವುದು ನಮ್ಮ ಹಕ್ಕು. ಮಾತನಾಡುವ ಹಕ್ಕನ್ನು ಕಸಿದುಕೊಂಡಿದ್ದಾರೆ. ಇದೊಂದು ದುರ್ದೈವದ ಸಂಗತಿ. ಮಾತನಾಡುವ ಹಕ್ಕನ್ನು ಪ್ರಶ್ನಿಸಿ ಸದನದ ಬಾವಿಗಿಳಿದು ನಾವು ಪ್ರತಿಭಟಿಸಿದೆವು. ಇದಕ್ಕೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಇಂದು ಮೂರು ಸಂಸದರನ್ನು ಮಾನತುಗೊಳಿಸಿದ್ದಾರೆ. ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ಸದಸ್ಯನ ಹಕ್ಕು ಅದನ್ನು ಕಿತ್ತುಕೊಳ್ಳಲಾಗಿದೆ. ನಮ್ಮ ಧ್ವನಿ ಹತ್ತಿಕ್ಕಲಾಗುತ್ತಿದೆ. ಆಡಳಿತ ಪಕ್ಷ ತನ್ನ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದೆ ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.