ರಾಮನಗರ: ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಬೇಕು ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ಉತ್ತಮ ಆಡಳಿತ ನಡೆಸಲಿ ಎಂದು ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ಸ್ಥಾನ ಕೊಟ್ಟಿದೆ. ಜವಾಬ್ದಾರಿಗಳನ್ನು ಕೊಟ್ಟಿದ್ದು ಪಕ್ಷದ ವರಿಷ್ಠರು. ಹೀಗಿರುವಾಗ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.
ಯಾರೂ ಶಾಶ್ವತವಲ್ಲ, ಯಾವ ಹುದ್ದೆಯೂ ಶಾಶ್ವತ ಅಲ್ಲ. ಹೇಳಿಕೆ ಕೊಡುವವರೂ ಕೂಡ ಹಿಂದೆ ತಿರುಗಿ ಅವರ ಬೆನ್ನು ನೋಡಿಕೊಳ್ಳಬೇಕು ಎಂದು ಹೇಳಿದರು.
ಇನ್ನು ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂಬ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಸ್ವಾಮೀಜಿ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಸಿಎಂ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಸಿಎಂ ಆಗಿ ಸಿದ್ದರಾಮಯ್ಯನವರು ಇದ್ದಾರೆ. ಸಿಎಂ ಸ್ಥಾನ ಖಾಲಿಯಾದಗ ಈ ಬಗ್ಗೆ ಚರ್ಚೆ ಮಾಡಬೇಕು. ಎಲ್ಲವನ್ನೂ ತೀರ್ಮಾನ ಮಾಡಲು ಹೈಕಮಾಂಡ್ ಇದೆ ಎಂದು ಹೇಳಿದರು.