ಗೋಕರ್ಣ: ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಗೋಕರ್ಣ ಮಹಾಗಣಪತಿ ಹಾಗೂ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗ ಮುಟ್ಟಿ ಪೂಜೆ ಸಲ್ಲಿಸಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಅರ್ಚಕರು ಸಂಕಲ್ಪ ಮಾಡಿದರು. ಬಳಿಕ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ವೇಳೆಯೂ ಅರ್ಚಕರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಸಂಕಲ್ಪ ಮಾಡಿ ಪೂಜೆ ಮಾಡಿದ್ದು ವಿಶೇಷವಾಗಿತ್ತು.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅರ್ಚಕರ ಸಂಕಲ್ಪ ವಿಚಾರವಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯಾಗಲಿ ಎಂದು ಅರ್ಚಕರು ಸಂಕಲ್ಪ ಮಾಡಿದ್ದರಲ್ಲಿ ತಪ್ಪೇನಿಲ್ಲ. ಈಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಅವರ ನಾಯಕತ್ವದಲ್ಲಿ ನಾವು ಮುಂದೆ ಹೋಗುತ್ತೇವೆ. ಕೆಲವರು ನನ್ನನ್ನು ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ. ಅವರ ಬಾಯಲ್ಲಿ ಬರುವುದನ್ನು ತಪ್ಪಿಸಲು ಸಾಧ್ಯವೇ? ಯಾರು ಏನೇ ಆಸೆ ಪಟ್ಟರೂ ಪಕ್ಷ ಅಂತಿಮವಾಗಿ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.