ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಜನರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಖುದ್ದು ಫೀಲ್ಡಿಗಿಳಿದಿದ್ದಾರೆ. ಈ ನಡುವೆ ಬೆಂಗಳೂರಿಗರು ಮುಂಜಾಗೃತೆ ವಹಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿ ಮಳೆ ಹೆಚ್ಚುತ್ತಿದೆ. ಜನರು ಮುಂಜಾಗೃತೆಯಿಂದ ಇರುವಂತೆ ಮನವಿ ಮಾಡುತ್ತೇನೆ. ಮುನೆಚ್ಚರಿಕೆ ಕ್ರಮವಾಗಿ ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಳೆಯಿಂದಾಗಿ ಟ್ರ್ಯಾಫಿಕ್ ಸಮಸ್ಯೆಯಾಗಬಹುದು, ಬೇರೆ ಸಮಸ್ಯೆಗಳು ಎದುರಾಗಬಹುದು. ಜನರು ಎಚ್ಚರದಿಂದ ಇರಬೇಕು. ಸಂಜೆ ಮತ್ತೊಮ್ಮೆ ಬೆಂಗಳೂರಿನಲ್ಲಿ ರೌಂಡ್ಸ್ ಹಾಕುತ್ತೇನೆ ಎಂದು ತಿಳಿಸಿದ್ದಾರೆ.
ವಿಪಕ್ಷದವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ. ನಿಮ್ಮ ರಾಜ್ಯದ ಗೌರವವನ್ನು ನೀವೇ ಯಾಕೆ ಹಾಳು ಮಾಡುತ್ತಿದ್ದೀರಿ. ಮಳೆ ಹೆಚ್ಚಾಗಿದೆ. ಪ್ರಕೃತಿಗೆ ಯಾರಾದರು ಬುದ್ಧಿ ಹೇಳಲು ಆಗುತ್ತಾ? ಮಳೆಯಿಂದ ಸಮಸ್ಯೆಯಾದರೆ ನಿಭಾಯಿಸುವ ಶಕ್ತಿ ಸರ್ಕಾರಕ್ಕಿದೆ, ಜನರಿಗಿದೆ. ಸುಮ್ಮನೇ ಟೀಕೆಗಳನ್ನು ಮಾಡುವುದರಿಂದ ನಿಮ್ಮ ರಾಜ್ಯದ ಗೌರವವನ್ನು ನೀವೇ ಹಾಳುಮಾಡಿದಂತಾಗುತ್ತದೆ ಎಂದು ಹೇಳಿದರು.