ಬೆಂಗಳೂರು: ಸಚಿವ ಡಿ.ಸುಧಾಕರ್ ವಿರುದ್ಧ ದಾಖಲಾಗಿರುವುದು ಸುಳ್ಳು ಕೇಸ್. ಸುಧಾಕರ್ ವಿರುದ್ಧ ದಾಖಲಾಗಿರುವ ದೂರು ಸಿವಿಲ್ ಪ್ರಕರಣ. ಧಮಕಿಗೂ ಪಿಸಿಆರ್ ದೂರಿಗೂ ಬಹಳ ವ್ಯತ್ಯಾಸವಿದೆ. ಈ ವಿಚಾರವಾಗಿ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಚಿವ ಸುಧಾಕರ್ ರಾಜೀನಾಮೆ ನೀಡುವ ಅಗತ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದೇನೆ. ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಸುಧಾಕರ್ ಅವರು ಅನುಮತಿ ಮೇರೆಗೆ ಖಾಸಗಿ ಜಮೀನು ಖರೀದಿ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಬೇರೆಯವರು ಕಾಂಪೌಂಡ್ ಹಾಕಿದ್ದಾರೆ. ಹೀಗಾಗಿ ಇವರ ಕಡೆಯವರು ಜಾಗ ಭದ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವಿಚಾರವಾಗಿ ಪಿಸಿಆರ್ ಪ್ರಕಾರ ದೂರು ದಾಖಲಿಸಲಾಗಿದೆ ಎಂದರು.
ದೂರು ನೀಡುವ ಸಂದರ್ಭದಲ್ಲಿ ಸುಧಾಕರ್ ಚಿತ್ರದುರ್ಗದಲ್ಲಿ ಇದ್ದರು. ಹೀಗಾಗಿ ಇದು ಸುಳ್ಳು ಕೇಸು ಎಂಬುದು ಗೊತ್ತಿದೆ. ನಾಳೆ ಬೆಳಗ್ಗೆ ನನ್ನ ಮೇಲೂ ಸುಳ್ಳು ದೂರು ನೀಡಬಹುದು. ಬಿಜೆಪಿಯವರು ಸುಧಾಕರ್ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಕನಸು ಕಾಣುತ್ತಿದ್ದಾರೆ. ಕಾಣಲಿ ಬಿಡಿ. ಯಾರೇ ತಪ್ಪು ಮಾಡಿದರೂ ಕಾನೂನು ಮುಂದೆ ಯಾರೂ ದೊಡ್ಡವರಿಲ್ಲ. ಕಾನೂನಿಗೆ ಎಲ್ಲರೂ ಗೌರವ ನೀಡಬೇಕು ಎಂದು ಹೇಳಿದರು.