ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ಯಾವುದೇ ಅಸಮಾಧಾನವಿಲ್ಲ. ಬಿಜೆಪಿಗೆ ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ತಮ್ಮ ತಪ್ಪು ಮುಚ್ಚಿಕೊಳ್ಳಲು ಅನಗತ್ಯವಾಗಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸರ್ಕಾರ ರಚನೆ ಆಗಿ 5 ತಿಂಗಳು ಆದರೂ ಇನ್ನೂ ಬಿಜೆಪಿಗೆ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ಬಿಜೆಪಿಯಲ್ಲಿನ ಆಂತರಿಕ ಕಲಹದಿಂದಾಗಿ ವಿಳಂಬ ಮಾಡುತ್ತಿದ್ದಾರೆ. ತಮ್ಮಲ್ಲಿನ ಒಡಕು ಮುಚ್ಚಿಕೊಳ್ಳಲು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ 3-4 ತಿಂಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಈಗಾಗಲೇ ಎಲ್ಲಾ ಕ್ಷೇತ್ರಗಳಿಗೂ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ವೀಕ್ಷಕರು ಕ್ಷೇತ್ರಗಳಿಗೆ ಹೋಗಿ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ. ಎಲ್ಲರೂ ಈಗಾಗಲೇ ಅಭ್ಯರ್ಥಿಗಳ ವರದಿ ಸಿದ್ಧ ಪಡಿಸಿಕೊಂಡಿದ್ದಾರೆ. ವೀಕ್ಷಕರು ಇನ್ನೂ ವರದಿ ಕೊಟ್ಟಿಲ್ಲ. ವರಿಷ್ಠರು ಹಲವು ಸಲಹೆಗಳನ್ನು ಕೊಟ್ಟಿದ್ದಾರೆ ಎಂದರು.