ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನಾಳೆ ಅಖಂಡ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಂಘಟನೆಗಳು ಪ್ರತಿಭಟನೆ ಮಾಡಲಿ ಯಾವುದೇ ಅಡ್ಡಿ ಪಡಿಸಲ್ಲ, ಆದರೆ ಬಂದ್ ಗೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.
ಸಾರ್ವಜನಿಕರಿಗೆ ತೊಂದರೆಯಾಗಬಾರದು, ಜನರಿಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ. ಸುಪ್ರಿಂ ಕೋರ್ಟ್, ಹೈಕೋರ್ಟ್ ಬಂದ್ ವಿಚಾರವಾಗಿ ಒಂದಿಷ್ಟು ಸೂಚನೆಗಳನ್ನು ನೀಡಿವೆ. ಅದನ್ನು ಪಾಲಿಸಬೇಕು. ಹಾಗಾಗಿ ಎಲ್ಲರೂ ಕಾನೂನು ಪಾಲನೆ ಮಾಡಬೇಕು. ಬಂದ್ ಗೆ ಅವಕಾಶಾವಿಲ್ಲ ಎಂದರು.
ನಾಳೆ ಕಾವೆರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆ ಇದ್ದು, ಸಭೆಗೆ ಅಧಿಕಾರಿಗಳು ಆನ್ ಲೈನ್ ಬದಲಿಗೆ ಖುದ್ದು ಭಾಗವಹಿಸಬೇಕು ಎಂದು ಸೂಚನೆ ನೀಡಿದ್ದೇನೆ. ತಮಿಳುನಾಡು 11,000 ಕ್ಯೂಸೆಕ್ ನೀರಿಗೆ ಬೇಡಿಕೆ ಇಟ್ಟಿದ್ದು, ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ. ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಲಿದ್ದಾರೆ ಎಂದು ತಿಳಿಸಿದರು.