ಬೆಂಗಳೂರು: ಕುಮಾರಸ್ವಾಮಿಯನ್ನು ಹಾಸನಕ್ಕೆ ಕಳುಹಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರೆಂಬ ಹೆಚ್.ಡಿ.ಕೆ.ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ಅಂತಹ ಮಾತನಾಡಲು ಮೂರ್ಖನಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಕುಮಾರಸ್ವಾಮಿಯವರನ್ನು ಹಾಸನಕ್ಕೆ ಕಳಿಸ್ತೀನಿ ಅಂತಾ ಎಲ್ಲೂ ಹೇಳಿಲ್ಲ. ಕುಮಾರಸ್ವಾಮಿ ಗಂಟೆಗೊಂದು, ಗಳಿಗೆಗೊಂದು ಮಾತನಾಡಬಹುದು, ಅವರಿಗೆ ಬುದ್ಧಿ ಸ್ವಲ್ಪ ಹೆಚ್ಚು ಕಡಿಮೆಯಾಗಿರಬಹುದು ಆದರೆ ನಾನು ಆ ಮಾತು ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಕುಮಾರಸ್ವಾಮಿಯವರ ತಂದೆ 25-30 ವರ್ಷಗಳ ಹಿಂದೆ ರಾಮನಗರಕ್ಕೆ ಬಂದು ಎಂಎಲ್ ಎ, ಪಿಎಂ ಸಹ ಆದರು.ನನ್ನ ವಿರುದ್ಧ ಎಂ.ಪಿಗೂ ನಿಂತಿದ್ರು. ಕುಮಾರಸ್ವಾಮಿ ಹಾಗೂ ಅವರ ಧರ್ಮ ಪತ್ನಿ ಸಹ ನನ್ನ ವಿರುದ್ಧ ನಿಂತಿದ್ರು. ನಾವೇ ಇಬ್ಬರು ನಿಂತು ಸರ್ಕಾರವನ್ನು ಮಾಡಿದೆವು. ಹೀಗಿರುವಾಗ ಅವರನ್ನು ಹಾಸನಕ್ಕೆ ಕಳಿಸ್ತೀನಿ ಎಂದು ಹೇಳುವಷ್ಟು ಮೂರ್ಖ ನಾನಲ್ಲ ಎಂದು ಟಾಂಗ್ ನೀಡಿದ್ದಾರೆ.
ಇದೇ ವೇಳೆ ಡಿ.ಕೆ.ಶಿ 6 ತಿಂಗಳು, ವರ್ಷದೊಳಗೆ ತಿಹಾರ್ ಜೈಲಿಗೆ ಹೋಗುತ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಅವರದ್ದು ಪ್ರೀಪ್ಲಾನ್ ಅಥವಾ ಇನ್ನೇನೋ ಇರಬಹುದು. ನಾನು ಓಡಿ ಹೋಗಲ್ಲ. ಕಾನೂನು ಚೌಕಟ್ಟಿನಲ್ಲಿ ಉತ್ತರ ಕೊಡುತ್ತೇನೆ ಎಂದು ಹೇಳಿದರು.