ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ವಿಪಕ್ಷ ನಾಯಕರು ನನ್ನ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಬ್ಲೂಫಿಲಂ ತೋರಿಸಿ ಮೇಲೆ ಬಂದವರು ಎನ್ನುತ್ತಿದ್ದಾರೆ. ಆರೋಪ ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಟೂರಿಂಗ್ ಟಾಕೀಸ್ ಗಳನ್ನು ಇಟ್ಟಿದ್ದೇ. ಒಂದಲ್ಲ ಮೂರ್ನಾಲ್ಕು ಕಡೆ ಟೆಂಟ್‌ಗಳನ್ನು ಇಟ್ಟಿದ್ದೆ. ದೊಡ್ಡಆಲಹಳ್ಳಿ, ಹಾರೋಬೆಲೆ, ಕೋಡಿಹಳ್ಳಿಗಳಲ್ಲಿ ನಡೆಸುತ್ತಿದ್ದೆ. ಹುಣಸೇಹಳ್ಳಿಯಲ್ಲಿ ಈಗಲೂ ಟೆಂಟ್ ಇದೆ. ಈ ಊರುಗಳಿಗೆ ಹೋಗಿ ಸಮೀಕ್ಷೆ ನಡೆಸಿ, ನಾನು ಯಾವ ಚಿತ್ರಗಳ ಪ್ರದರ್ಶನ ಮಾಡಿಸುತ್ತಿದ್ದೆ ಎಂದು ಜನರ ಬಳಿ ಕೇಳಿ ಎಂದು ಹೇಳಿದರು.
ಬ್ಲೂಫಿಲಂ ತೋರಿಸಿ ಮೇಲೆ ಬಂದವನು ಎಂದು ಆರೋಪಿಸಿರುವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಸಾಬೀತು ಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದರು.
ಇದೇ ವೇಳೆ ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿದ ಡಿಸಿಎಂ, ಅಧಿಕಾರ ಹಂಚಿಕೆ ನನಗೆ, ಸಿಎಂ, ವರಿಷ್ಠರಿಗೆ ಸಂಬಂಧಪಟ್ಟ ವಿಚಾರ. ಈ ಹಿಂದೆ ಬಿಜೆಪಿಯವರು ನಮ್ಮ ಗ್ಯಾರಂಟಿ ಬಗ್ಗೆ ಟೀಕೆ ಮಾಡುತ್ತಿದ್ದರು. ಈಗ ಅವರೇ ನಮ್ಮ ಗ್ಯಾರಂಟಿ ಯೋಜನೆ ಕಾಪಿ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.