ಬೆಂಗಳೂರು: ಲುಲು ಮಾಲ್ ಆಸ್ತಿ ವಿಚಾರ, ಕರೆಂಟ್ ಬಿಲ್ ವಿಚಾರವನ್ನು ಪ್ರಸ್ತಾಪಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಡಿಸಿಎಂ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪೊಗರು ಮಾತುಗಳು, ಬ್ಲ್ಯಾಕ್ ಮೇಲ್ ಗಳಿಗೆ ನಾನು ಹೆದರಲ್ಲ ಎಂಬುದು ಅವರಿಗೂ ಗೊತ್ತಿದೆ. ಹೆಚ್.ಡಿ.ಕೆ ಕೇಳಿರುವ ಎಲ್ಲಾ ಲೆಕ್ಕ ದಾಖಲೆಗಳನ್ನು ಕೊಡಲು ಸಿದ್ಧ ಎಂದು ಹೇಳಿದರು.
ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡಿದ್ದಾರೆ. ಹತಾಶೆಯಲ್ಲಿ ಬಾಯಿಗೆ ಬಂದದ್ದು ಮಾತನಾಡುತ್ತಿದ್ದಾರೆ. ಅವರ ಮಾತುಗಳಿಗೆ ರಾಜ್ಯದ ಜನ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಅವರು ಕೇಳುತ್ತಿರುವ ಲೆಕ್ಕಾಚಾರದ ಪಟ್ಟಿ ಕೊಡೋಣ. ನಾನು ಮಾಲ್ ಕಟ್ಟಿರುವ ಜಾಗ ಕೇಂದ್ರ ಸರ್ಕಾರದ ಒಂದು ಸಂಸ್ಥೆಗೆ ಸೇರಿದ್ದು. ಆ ಸಂಸ್ಥೆಯವರು ದಾಖಲೆ ಮುಂದಿಟ್ಟು ಟೆಂಡರ್ ಕರೆದಿದ್ದರು. ಅದನ್ನು ನಮ್ಮ ಸ್ನೇಹಿತರು ಖರೀದಿ ಮಾಡಿದ್ದರು. ಅವರಿಂದ ನಾನು ಖರೀದಿ ಮಾಡಿ ಜಂಟಿ ಸಹಯೋಗದಲ್ಲಿ ಮಾಲ್ ಕಟ್ಟಿದ್ದೇವೆ. ಅದರಲ್ಲಿ ಏನಾದರೂ ತಪ್ಪಿದ್ದರೆ ನನ್ನನ್ನು ಗಲ್ಲಿಗೆ ಹಾಕಲಿ ಎಂದು ಹೇಳಿದರು.
ನನ್ನನ್ನು ನಿಯಂತ್ರಿಸಲು ಹೆಚ್ ಡಿಕೆ ಈಗಾಗಲೇ ಬೇಕಾದಷ್ಟು ಪ್ರಯತ್ನ ಮಾಡಿದ್ದಾರೆ. ಅವರ ತಂದೆಯವರು ಕೂಡ 10-15 ವರ್ಷಗಳ ಹಿಂದೆಯೇ ಜಯರಾಜ್ ಎಂಬ ಅಧಿಕಾರಿ ಮೂಲಕ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಈಗಲೂ ಯಾವುದೇ ರೀತಿಯ ತನಿಖೆ ಮಾಡಿಸಲಿ. ನಾನು ಎಲ್ಲದಕ್ಕೂ ಸಿದ್ಧ ಎಂದರು.