ಬೆಂಗಳೂರು: ಮನೆ ದೀಪಾಲಂಕಾರಕ್ಕೆ ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ವಿಚಾರವಾಗಿ ಬೆಸ್ಕಾಂ ನವರು ಬರಲಿ, ದಂಡ ಕಟ್ಟುತ್ತೇನೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸೋಶಿಯಲ್ ಮೀಡಿಯಾ ತಂಡ ಅದರ ಡ್ಯೂಟಿ ಮಾಡಿದೆ. ಅಚಾತುರ್ಯವೋ, ಕಳ್ಳತನವೋ ಅದನ್ನು ಹೆಚ್.ಡಿ.ಕೆಯವರೇ ಹೇಳಿದ್ದಾರೆ. ಬೆಸ್ಕಾಂ ಏನು ಕಾನೂನು ಕ್ರಮ ಕೈಗೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ನಾವು ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದರು.
ಅಸೂಯೆಗೆ ಮದ್ದಿಲ್ಲ. ಚಾನ್ಸ್ ಸಿಕ್ಕಿಲ್ಲ ಎಂದು ಅವರು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಮಾಡಲಿ ಪಾಪ. ಲೋಕಸಭಾ ಚುನಾವಣೆಗೆ ಎನ್ ಡಿಎ ಜೊತೆಯೂ ಕೈ ಜೋಡಿಸಿದ್ದಾರೆ. ಆದರೆ ಈ ವಯಸ್ಸಿನಲ್ಲಿ ದೇವೇಗೌಡರನ್ನು ಈ ಸ್ಥಿತಿಗೆ ತಂದುಬಿಟ್ಟರಲ್ಲ ಎಂಬ ಬೇಜಾರು ನನಗಿದೆ. ಹೆಚ್.ಡಿ.ದೇವೆಗೌಡರು ಏನೋ ಕಾಪಾಡಿಕೊಂಡು ಬಂದಿದ್ದರು. ಆದರೆ ಕೊನೆ ವಯಸ್ಸಿನಲ್ಲಿ ಅನಿವಾರ್ಯವಾಗಿ ಎನ್ ಡಿಎ ಜೊತೆ ಕೈಜೋಡಿಸುವ ಹಂತಕ್ಕೆ ತಂದಿದ್ದು ಬೇಸರವಾಗುತ್ತಿದೆ. ಕುಮಾರಸ್ವಾಮಿಯವರಿಗೆ ಒಳ್ಳೆಯದಾಗಲಿ ಎಂದು ಟಾಂಗ್ ನೀಡಿದರು.