ಬೆಂಗಳೂರು: ಗ್ಯಾರಂಟಿಗಳಿಗೆ ಮರುಳಾಗಬೇಡಿ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಗರಂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿಗೂ ಗ್ಯಾರಂಟಿ ಯೋಜನೆಗಳಿಗೂ ಏನು ಸಂಬಂಧ? ನಮ್ಮ ಗ್ಯಾರಂಟಿಗಳ ಬಗ್ಗೆ ಅವರಿಗೇನು ಗೊತ್ತಿದೆ? ಅವರೇನು ಫಲಾನುಭವಿಗಳಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಯೋಜನೆಗಳು ತಲುಪಿವೆಯೇ ಇಲ್ಲವೇ ಎಂಬುದನ್ನು ಜನರ ಬಳಿ ಕೇಳಬೇಕು. ಚನ್ನಪಟ್ಟಣದ ಮತದಾರರ ಬಳಿ ನಾನೇ ಮಾತನಾಡಿದ್ದೇನೆ. ಅವರನ್ನು ಕೇಳಿದರೆ ಕುಮಾರಸ್ವಾಮಿಗೆ ಗೊತ್ತಾಗುತ್ತದೆ. ಗೃಹ ಲಕ್ಷ್ಮೀ ಯೋಜನೆಯಲ್ಲಿ ಶೇ.5ರಷ್ಟು ಮಾತ್ರ ತೊಂದರೆಯಾಗಿದೆ ಎಂದರು.
ಬಡವರು, ಹೆಣ್ಣುಮಕ್ಕಳ ನೋವು ಕುಮಾರಸ್ವಾಮಿಗೆ ಗೊತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಜನರು ಖುಷಿಯಿಂದ ಹಬ್ಬ ಆಚರಿಸುತ್ತಿದ್ದಾರೆ. ದಸರಾಗೆ ಬಂದಿದ್ದ ಜನರನ್ನು ನೋಡಿದರೂ ಗೊತ್ತಾಗುತ್ತದೆ. ಕುಮಾರಸ್ವಾಮಿ ಬಹಳ ಅರ್ಜೆಂಟ್ ನಲ್ಲಿದ್ದಾರೆ. ಸುಮ್ಮನೇ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.