ಬೆಂಗಳೂರು: ಜೆಡಿಎಸ್ ನ ಹಲವು ಮುಖಂಡರು ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಿಸ್ಟರ್ ಡಿ.ಕೆ.ಶಿವಕುಮಾರ್ ಈ ಆಟ ನಡೆಯಲ್ಲ ಅಂತಾ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನನಗೆ ಎಚ್ಚರಿಕೆ ಕೊಟ್ಟಿದ್ದಾರೆ. ದೇವೇಗೌಡರ ಮಾತು ನನಗೆ ಆಶಿರ್ವಾದವಿದ್ದಂತೆ. ನಿಮ್ಮ ಸುಪುತ್ರನ ಕ್ಷೇತ್ರದ ಮುಖಂಡರೇ ಕಾಂಗ್ರೆಸ್ ಗೆ ಬಂದಿದ್ದಾರೆ ಎಂದು ಟಾಂಗ್ ನೀಡಿದರು.
ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದಾಗ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು? ಬಿಜೆಪಿ ಜೊತೆ ಹೊಂದಾಣಿಕೆ ಮಡಿಕೊಳ್ಳಲ್ಲ ಎಂದವರು ಈಗ ಮೈತ್ರಿ ಮಾಡಿಕೊಂಡಿದ್ದೀರಿ. ಅಸಮಾಧಾನಗೊಂಡವರು ಏನು ಮಾಡಬೇಕು? ಎಂದು ಪ್ರಶ್ನಿಸಿದರು.
ರಾಜಕೀಯ ಹಾವು ಏಣಿ ಆಟ ಇದ್ದಂತೆ. ನೀವು ಹೇಗೆ ಹೆದರಿಸಿದರೂ ಡಿ.ಕೆ.ಶಿವಕುಮಾರ್ ಹೆದರಲ್ಲ ಅಂತ ಗೊತ್ತಿದೆ. ನೀವು ಯಾರನ್ನು ಬೇಕಾದರೂ ಕಟ್ಟಿಹಾಕಿಕೊಳ್ಳಿ, ಹಿಡಿದಿಟ್ಟುಕೊಳ್ಳಿ. ಆದರೆ ನಾವು ಮನೆ ಮನೆಗೆ ಹೋಗಿ ನಮ್ರತೆಯಿಂದ ಕಾರ್ಯಕರ್ತರನ್ನು ಕರೆದುಕೊಂಡು ಬರೆತ್ತೇವೆ ಎಂದು ಸವಾಲು ಹಾಕಿದರು.
ತಾವು ಎಷ್ಟೇ ವಾರ್ನಿಂಗ್ ಕೊಟ್ಟರೂ ತಮ್ಮ ಸುಪುತ್ರನ ಕ್ಷೇತ್ರದ ಮುಖಂಡರು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ಕಾಂಗ್ರೆರ್ಸ್ ನ ಎಂಎಲ್ ಎ ಆಗಿದ್ದ ಸಿ.ಎಂ.ಇಬ್ರಾಹಿಂ ರನ್ನು ಕರೆದುಕೊಂಡು ಹೋದಿರಿ. ದಂಡನಾಯಕನಾಗಿ ಎಷ್ಟು ಸಲ ಪಕ್ಷ ವಿಸರ್ಜನೆ ಮಾಡ್ತೀವಿ ಅಂತೀರಾ? ಸಿದ್ಧಾಂತಗಳನ್ನು ನಂಬಿಕೊಂಡ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು? ನೋಡ್ತಾ ಇರಿ ಸಾಗರೋಪಾದಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗ್ತಾರೆ ಎಂದು ಟಾಂಗ್ ನೀಡಿದ್ದಾರೆ.