ಬೆಂಗಳೂರು: ರಾಜ್ಯದ ಪ್ರತಿ ಮನೆ ಮನೆಗೂ ಗ್ಯಾರಂಟಿ ಯೋಜನೆ ತಲುಪಿದೆಯೇ ಎಂಬುದನ್ನು ಪರಿಶೀಲಿಸಲು ನವೆಂಬರ್ 28ರಂದು ಸಮಿತಿ ರಚನೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧಿಕಾರಿದಲ್ಲಿ ಇರುವವರೆಗೂ ಗ್ಯಾರಂಟಿಗಳನ್ನು ತೆಗೆಯಲ್ಲ. ಬಿಜೆಪಿ, ಜೆಡಿಎಸ್ ಗೆ ಮತಹಾಕಿದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡ್ತಾರೆ ಎಂದು ಹೇಳಿದರು.
ಜನವರಿಯಲ್ಲಿ ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗುವುದು. ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ನ.28ರಂದು ಸಮಿತಿ ರಚಿಸಲಾಗುವುದು. ಗ್ಯಾರಂಟಿಗಳ ಮೇಲ್ವಿಚಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ಮನೆಗೆ ತೆರಳಿ ಗ್ಯಾರಂಟಿ ಯೋಜನೆ ತಲುಪಿದೆಯೇ? ಏನಾದರೂ ಬದಲಾವಣೆ ಮಾಡಬೇಕಾ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು ಎಂದರು.
ಮನೆ ಮನೆಗೆ ತೆರಳಿ ಬಿಜೆಪಿ, ಜೆಡಿಎಸ್ ಗೆ ಮತ ಹಾಕಿದರೆ ಗ್ಯಾರಂಟಿ ರದ್ದು ಮಾಡ್ತಾರೆ, ಕಾಂಗ್ರೆಸ್ ಆಡಳಿತದಲ್ಲಿ ಮುಂದುವರೆದರೆ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದೆ. ಇದು ನಿಶ್ಚಿತ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.