ಬೆಂಗಳೂರು: ಕಾವೇರಿ ನೀರಿಗಾಗಿ ಕರೆ ನೀಡಲಾಗಿರುವ ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದ ಹಿತ ಕಾಯಲು, ಹೋರಾಟಕ್ಕೆ ನಮ್ಮ ಸಹಕಾರವಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಮ್ಮ ನೆಲ, ಜಲ, ಭಾಷೆ ವಿಚಾರದಲ್ಲಿ ಪಕ್ಷಾತೀತ ಹೋರಾಟದ ಅಗತ್ಯವಿದೆ. ರಾಜ್ಯದ ಹಿತ ಕಾಪಾಡೋಕೆ ಸಹಕಾರ ಕೊಡ್ತೀವಿ. ನಾವು ನಮ್ಮ ರಾಜ್ಯದ ಹಕ್ಕು ಉಳಿಸಲು ಹೋರಾಡುತ್ತಿದ್ದೇವೆ. ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡುವುದಿಲ್ಲ ಎಂದು ಹೇಳಿದರು.
ಹೋರಾಟ ಮಾಡಲಿ ಅದು ಅವರ ಹಕ್ಕು, ಹೋರಾಟದಲ್ಲಿ ಭಾಗಿಯಾಗುವ ಪಕ್ಷ, ಸಂಘಟನೆಗಳಿಗೆ ಅಡ್ಡಿ ಮಾಡಲ್ಲ, ಆದರೆ ಶಾಂತಿ ಕಾಪಾಡಬೇಕು. ಹೋರಾಟಗಾರರು ಯಾವುದೇ ಸಾರ್ವಜನಿಕ ಆಸ್ತಿ, ಪಾಸ್ತಿಗೆ ನಷ್ಟವಾಗುವಂತೆ ನಡೆದುಕೊಳ್ಳಬಾರದು ಎಂದರು. ಕಾವೇರಿ ನದಿ ನೀರಿನ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಬೇಕು. ಬಿಜೆಪಿ ನಾಯಕರು ಈ ಬಗ್ಗೆ ಮೋದಿಯವರಿಗೆ ಮನವರಿಕೆ ಮಾಡಬೇಕು ಎಂದು ಒತ್ತಾಯಿಸಿದರು.