ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಿಎಸ್ ವೈ, ಬೊಮ್ಮಾಯಿ, ಹೆಚ್.ಡಿ.ಕುಮಾರಸ್ವಾಮಿ ಎಲ್ಲರೂ ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನೀಡಿದ್ದ ಪತ್ರಿಕಾ ಸಂದರ್ಶನ ನೋಡಿದರೆ ಎಲ್ಲರಿಗೂ ಗೊತ್ತಾಗುತ್ತದೆ. ಪ್ರಧಾನಿ ಮೋದಿಯವರು ಮಧ್ಯಪ್ರವೇಶ ಮಾಡಬೇಕು ಎಂದು ಹೆಳಿದ್ದಾರೆ ಎಂದರು.
ನಾವು ರಾಜ್ಯದ ಜನರ ರಕ್ಷಣೆ ಮಾಡಲು ಹೊರಟಿದ್ದೇವೆ. ಆದರೆ ವಿಪಕ್ಷಗಳು ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಿ.ಟಿ.ರವಿಯವರು ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಬೇಕು ಎಂದಿದ್ದಾರೆ. ಮಂಡ್ಯಕ್ಕೆ ಹೋಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿ.ಟಿ.ರವಿಗೆ ಜಾಗವಿಲ್ಲ ಅದಕ್ಕೆ ಮಂಡ್ಯಕ್ಕೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಸೋತು ಮಂಡ್ಯಕ್ಕೆ ಬಂದು ನಿಂತಿದ್ದಾರೆ. ಇಲ್ಲಾದರೂ ಜಾಗವಿರುತ್ತಾ? ಎಂದು ಮಂಡ್ಯಕ್ಕೆ ಹೋಗಿದ್ದಾರೆ ಎದು ಟಾಂಗ್ ನೀಡಿದರು.