ಬೆಳಗಾವಿ: ಸಚಿವರು, ಶಾಸಕರ ನಡುವಿನ ಅಸಮಾಧಾನ ಕಾಂಗ್ರೆಸ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ದಿಸಿಎಂ ಡಿ.ಕೆ.ಶಿವಕುಮಾರ್ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದರೂ ಯಾವೊಬ ಸಚಿವರು, ಶಾಸಕರು ಸ್ವಾಗತಿಸಲು ಆಗಮಿಸದಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಡಕಿಲ್ಲ. 136 ಶಾಸಕರೂ ನಮ್ಮವರೇ. ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಲ್ಲಿ ಬಿರುಕಿದೆ ಎಂದು ಹೇಳುವ ಬಿಜೆಪಿ ನಾಯಕರು ಒಮ್ಮೆ ಜೆ.ಹೆಚ್. ಪಟೇಲರ ಭಾಷಣ ಕೇಳಿಸಿಕೊಳ್ಳಲಿ ಎಂದು ಹೇಳಿದರು.
ಬೆಳಗಾವಿಯ ಶಾಸಕರು, ಸಚಿವರು ಸ್ವಾಗತಿಸಲು ಬಂದಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಡಿಸಿಎಂ, ನೆನ್ನೆ, ಮೊನ್ನೆ ಸಚಿವ ಸತೀಶ್ ಜಾರಕಿಹೊಳಿ ನನ್ನ ಜೊತೆಯಲ್ಲಿಯೇ ಇದ್ದರು. ನಾನು ಬಂದಿರುವುದು ಖಾಸಗಿ ಕಾರ್ಯಕ್ರಮಕ್ಕೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ನಾಮಕರಣ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿ ಇದ್ದಾರೆ. ಕೌಜಲಗಿ ಅವರಿಗೆ ಆರೋಗ್ಯ ಸರಿಯಿಲ್ಲ. ದಿಢೀರ್ ಎಂದು ನಿನ್ನೆ ರಾತ್ರಿ ಈ ಕಾರ್ಯಕ್ರಮ ನಿಗದಿಯಾದ ಕಾರಣಕ್ಕೆ ಬಂದಿದ್ದೇನೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಕೆಲಸಗಳು ಇರುತ್ತವೆ ಎಂದು ಸಮಜಾಯಿಷಿ ನೀಡಿದ್ದಾರೆ.