ಬೆಂಗಳೂರು: ಹತ್ತಿ ಇಳಿಯಲು ಕಾಂಗ್ರೆಸ್ ಪಕ್ಷ ಬಸ್ ಅಲ್ಲ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇವೆ ಎಂದರೆ ಪ್ರತಿ ನಿಲ್ದಾಣದಲ್ಲೂ ಬಸ್ ಇಳಿದು ಹತ್ತುವಂತೆ ಮಾಡುವುದಲ್ಲ, ಒಮ್ಮೆ ಹತ್ತಿದರೆ ಕಡೆಯ ತನಕವೂ ಇರುವಂತಹ ದೃಢ ನಿರ್ಧಾರ ಮಾಡಬೇಕು. ಬಸ್ ಹತ್ತುವುದು, ಇಳಿಯುವುದು ಆಗಬಾರದು ಎಂದು ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾದ ಜೆಡಿಎಸ್ ಮುಖಂಡರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಆಗಿ ಸಂದೇಶ ರವಾನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ನಾಯಕ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪಕ್ಷದಲ್ಲಿ ಹೆಚ್ಚು ಕಾಲ ಇದ್ದಷ್ಟು ಹಿರಿತನ, ಜವಾಬ್ದಾರಿ ಮತ್ತು ಗೌರವ ಬರುತ್ತದೆ. ಬರುವುದು, ಹೋಗುವುದು ಮಾಡಿದರೆ ನಾಯಕತ್ವಕ್ಕೂ ಧಕ್ಕೆಯಾಗುತ್ತದೆ ಎಂದರು.
ಕೇವಲ ಇಂದು ಪಕ್ಷ ಸೇರ್ಪಡೆಯಾದ ನಾಯಕರಿಗೆ ಮಾತ್ರ ಹೇಳುತ್ತಿಲ್ಲ, ರಾಜ್ಯದ ಸಮಸ್ತ ಕಾರ್ಯಕರ್ತರು, ಮುಖಂಡರಿಗೆ ಕಿವಿ ಮಾತು ಹೇಳುತ್ತಿದ್ದೇನೆ. ಈಗ ನಾವು ಕೊಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ- ಜನತಾದಳ ಪಕ್ಷಗಳಿಗೆ ನೀಡಲು ಸಾಧ್ಯವಾಯಿತೇ? ಪಕ್ಷ ಸೇರ್ಪಡೆಯಾದ ಆಯನೂರು ಮಂಜುನಾಥ್ ಅವರು ಬಿಜೆಪಿಗೆ ಹೋದರು, ಜೆಡಿಎಸ್ ಸೇರಿದರು ಆದರೆ ಕಾಂಗ್ರೆಸ್ ಪಕ್ಷದ ಬಗೆಗಿನ ಒಲವು ಅವರನ್ನು ಮತ್ತೆ ಕರೆತಂದಿದೆ. ಎಲ್ಲಾ ನದಿಗಳು ಸಮುದ್ರ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಸೇರಲೇ ಬೇಕು.. ನಮ್ಮ ಪಕ್ಷ ಸಮುದ್ರ ಇದ್ದಂತೆ ಎಂದು ಹೇಳಿದ್ದಾರೆ.