ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ 5ನೇ ಗ್ಯಾರಂಟಿ ಯೋಜನೆ ‘ಯುವನಿಧಿ’ ಯೋಜನೆ ನೋಂದಣಿ ಪ್ರಕ್ರಿಯೆ ಚಾಲನೆ ದೊರೆತಿದೆ. ಯುವನಿಧಿ ಯೋಜನೆಗೆ ಚಾಲನೆ ದೊರೆಯುತ್ತಿದ್ದಂತೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ನುಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಐದು ಯೋಜನೆಗಳನ್ನು ನೋಡಿ ವಿಪಕ್ಷಗಳ ಸ್ಥಿತಿ ಏನಾಗಿದೆ ಎಂಬುದನ್ನು ಕವನದ ಮೂಲಕ ವ್ಯಂಗ್ಯವಾಡಿದ್ದಾರೆ.
ಐದು ಬೆರಳು ಸೇರಿ ಒಂದು ಮುಷ್ಟಿಯಾಯ್ತು
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯ್ತು
ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯ್ತು
ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆ ಎಸೆದು ಹೋದಳು
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯ್ತು
ಕರ್ನಾಟಕ ಸಮೃದ್ಧವಾಯ್ತು
ಕರ್ನಾಟಕ ಪ್ರಬುದ್ಧವಾಯ್ತು… ಎಂದು ಕವನದ ಮೂಲಕವೇ ವಿಪಕ್ಷಗನ್ನು ಛೇಡಿಸಿದ್ದಾರೆ.
ಇಂದಿನಿಂದ ಯುವನಿಧಿ ಯೋಜನೆ ನೋಂದಣಿ ಆರಂಭವಾಗಿದೆ. ಈ ಕಾಲದ ಯುವಕರು ಅದೃಷ್ಟವಂತರು. ನಾವು ಯುವಕರಾಗಿದ್ದ ಸಂದರ್ಭದಲ್ಲಿ ಇಂತಹ ಯೋಜನೆಗಳು, ಅವಕಾಶಗಳು ಸಿಕ್ಕಿರಲಿಲ್ಲ ಎಂದರು. ಇದೇ ವೇಳೆ ಸ್ವಾಮಿ ವಿವೇಕಾನಂದರ ಮಾತು ನೆನೆದ ಡಿಸಿಎಂ, ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು ಎಂದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ದಿನ ನಾನು ಒಂದು ಮಾತು ಹೇಳಿದ್ದೆ, ನಮ್ಮ ಸರ್ಕಾರ ಮುಂದೆ ಅಧಿಕಾರಕ್ಕೆ ಬರಬೇಕಾದರೆ ಯುವಕರು ಹಾಗೂ ಮಹಿಳೆಯರ ಮೇಲೆ ವಿಶ್ವಾಸ ಇಡಬೇಕು ಎಂದು.. ಮಹಿಳೆಯರು, ಕೃಷಿಕ, ಕಾರ್ಮಿಕ, ಯುವಕ ಎಲ್ಲರೂ ಸೇರಿ ನಮಗೆ ಶಕ್ತಿ ತುಂಬಲಿದ್ದಾರೆ ಎಂದು. ಈ ದಿನ ನನಗೆ ಖುಷಿಯಾಗಿದೆ. ಕಾರಣ, ನಾವು ಕೊಟ್ಟ ಮಾತಿನಂತೆ ನಡೆಯುತ್ತಿರುವ ದಿನ ಇದಾಗಿದೆ ಎಂದರು.
ಬಿಜೆಪಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ನಿಮ್ಮ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಆದರೆ ಮಾಡಲಿಲ್ಲ. ಕೇವಲ ಭರವಸೆಯನ್ನು ಮಾತ್ರ ಕೊಟ್ಟರು. ಆದರೆ ನಾವಿಂದು ಕೊಟ್ಟ ಭರವಸೆಯಂತೆ 5 ಗ್ಯಾರಂಟಿ ಯೋಜಜನೆ ಜಾರಿ ಮಾಡಿದ್ದೇವೆ. ಎಲ್ಲಾ ಕುಟುಂಬ ಹಾಗೂ ಎಲ್ಲರ ಬದುಕಿನಲ್ಲಿ ಬದಲಾವಣೆ ತರಲು, ಶಕ್ತಿ ತುಂಬಲು ಈ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.