ಬೆಂಗಳೂರು: ಬಸವಣ್ಣನವರಿಗೆ ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬರೇ ಮಸಿ ಬಳಿದಿಲ್ಲ. ಇಡೀ ಬಿಜೆಪಿ ಪಕ್ಷವೇ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿದೆ. ಯತ್ನಾಳ್ ಇತಿಹಾಸವೇ ಬಿಜೆಪಿ ಇತಿಹಾಸ. ಹೀಗಾಗಿ ಅವರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಯತ್ನಾಳ್ ಅವರಂತಹ ಮುತ್ತು ರತ್ನವನ್ನು ಬಿಜೆಪಿಯವರು ತಮ್ಮ ಬಳಿಯೇ ಇಟ್ಟುಕೊಳ್ಳಲಿ. ಅದು ಆ ಪಕ್ಷದ ಆಂತರಿಕ ವಿಚಾರ. ಅದಕ್ಕೆ ನಾವು ತಲೆ ಹಾಕುವುದಿಲ್ಲ. ಯತ್ನಾಳ್ ಹೇಳಿಕೆಯನ್ನು ಯಡಿಯೂರಪ್ಪ, ವಿಜಯೇಂದ್ರ, ಅಶೋಕ, ಕೇಂದ್ರ ಸಚಿವ ಸೋಮಣ್ಣ ಹಾಗೂ ಬೊಮ್ಮಾಯಿ ಅವರ್ಯಾರು ಖಂಡಿಸಿದ್ದಾರೆಯೇ? ಯಾರೂ ಸಹ ಖಂಡಿಸಿಲ್ಲ. ಇದು ಬಿಜೆಪಿ ಬಸವಣ್ಣನವರ ವಿರೋಧಿ ಎಂಬುದನ್ನು ನಿರೂಪಿಸುತ್ತದೆ ಎಂದು ಹೇಳಿದರು.
ಬಸವಣ್ಣನವರ ಚಿಂತನೆಯೇ ಕಾಂಗ್ರೆಸ್ ಪಕ್ಷದ ಚಿಂತನೆ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದಾಗ ಬಸವಣ್ಣನವರ ಜಯಂತಿಯಂದೇ ಪ್ರಮಾಣ ವಚನ ತೆಗೆದುಕೊಂಡರು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿದ್ದು, ಬಸವಣ್ಣನವರ ಜಯಂತಿಗೆ ಶಕ್ತಿ ಕೊಟ್ಟಿದ್ದು, ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಯಾವ ಜನತಾದಳ, ಬಿಜೆಪಿ, ಜನಸಂಘವೂ ಈ ಕೆಲಸ ಮಾಡಿಲ್ಲ” ಎಂದರು.
ನಮ್ಮ ಸಂವಿಧಾನದ ಮೂಲ ಶಕ್ತಿ ಹಾಗೂ ಆಶಯವಾದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಚಿಂತನೆಯನ್ನು ಮೊದಲು ಪ್ರತಿಪಾದಿಸಿದವರು ಬಸವಣ್ಣನವರು. ನಮ್ಮ ಪಕ್ಷದ ಸಿದ್ಧಾಂತಕ್ಕೂ ಬಸವಣ್ಣನವರಿಗೂ ಅವಿನಾಭಾವ ಸಂಬಂಧವಿದೆ ಇದನ್ನು ನಾವು ಉಳಿಸಿ, ಬೆಳೆಸಿ, ರಕ್ಷಣೆ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದರು.