ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರವಾಗಿಯಾಗಲಿ, ಸಿಎಂ ಬದಲಾವಣೆ ಬಗ್ಗೆಯಾಗಿ ಯಾರೂ ಮಾತನಾಡುವಂತಿಲ್ಲ. ಇದೇ ರೀತಿ ಮಾತು ಮುಂದುವರಿದರೆ ನೋಟಿಸ್ ನೀಡಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಚಿವರು, ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಚಂದ್ರಶೇಖರ ಸ್ವಾಮೀಜಿ ನನ್ನ ಮೇಲಿನ ಅಭಿಮಾನದಿಂದ ಹೇಳಿರಬಹುದು. ಆದರೆ ಈ ಬಗ್ಗೆ ಪದೇ ಪದೇ ಚರ್ಚೆಗಳು ಬೇಡ. ಸಿಎಂ ಹುದ್ದೆ ಬಗ್ಗೆಯಾಗಲಿ, ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆಯಾಗಲಿ ಯಾರೂ ಮಾತನಾಡಕೂಡದು. ಸಚಿವರು, ಶಾಸಕರು ಯಾರೇ ಆಗಲಿ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡಿದ್ದರೆ ಒಳ್ಳೆಯದು. ಪಕ್ಷದ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಹೇಳುತ್ತಿದ್ದೇನೆ. ನೀವು ನಿಮ್ಮ ಬಾಯಿಗೆ ಸ್ವಲ್ಪ ಬೀಗ ಹಾಕಿಕೊಂಡಿದ್ದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಯಾರಾದರೂ ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಹೇಳಿಕೆಗಳನ್ನು ಮುಂದುವರೆಸಿದರೆ ನೋಟಿಸ್ ನೀಡಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಡಿಸಿಎಂ, ಸಿಎಂ ಹುದ್ದೆ ಬಗ್ಗೆ ಚರ್ಚಿಸಲು ಖರ್ಗೆ, ರಾಹುಲ್ ಗಾಂಧಿ ಎಲ್ಲಾ ನಾಯಕರಿದ್ದೇವೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಹೈಕಮಾಂಡ್ ಇದೆ. ಅನಗತ್ಯವಾಗಿ ಪಕ್ಷ ಹಾಗೂ ಸರ್ಕಾರಕ್ಕೆ ಡ್ಯಾಮೇಜ್ ಆಗುವ ಹೇಳಿಕೆಗಳನ್ನು ನೀಡುವುದು ಬೇಡ ಎಂದು ಹೇಳಿದರು.