ಬೆಂಗಳೂರು: ಸಿಡಿ ನಕಲಿಯಾಗಿದ್ದರೆ ತನಿಖೆ ಯಾಕೆ..? ನೀವು ಸರಿ ಇದ್ದರೆ ಯಾರು ಸಿಕ್ಕಿ ಹಾಕಿಸುತ್ತಾರೆ..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ರಮೇಶ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣದಲ್ಲಿ ಷಡ್ಯಂತ್ರ ಸಾಮಾನ್ಯ. ನಿಮ್ಮ ಶರ್ಟು, ಪ್ಯಾಂಟು ಬಿಚ್ಚಿ ಎಂದು ಕಾಂಗ್ರೆಸ್ ಪಕ್ಷದವರು ಹೇಳಿದ್ರಾ? ರಮೇಶ್ ಜಾರಕಿಹೊಳಿ ಐದು ಸಲ ಶಾಸಕರಾಗಿದ್ದಾರೆ. ಅವರೇನು ದಡ್ಡರೇ? ಎಂದು ಪ್ರಶ್ನಿಸಿದ್ದಾರೆ.
ಸಚಿವ ಎಸ್.ಟಿ. ಸೋಮಶೇಖರ್, ಕಾಂಗ್ರೆಸ್ ಪಕ್ಷದ ಬಗ್ಗೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಅವರು 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಅವರು ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ. ಅವರ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ಬ್ಲಾಕ್ಮೇಲ್ ಮಾಡಿ ಕೆಲವರು ಮಂತ್ರಿಯಾಗಿದ್ದಾರೆ ಎಂದು ಹೇಳಿದ್ದರು. ಇದರ ಬಗ್ಗೆ ಉತ್ತರಿಸಲಿ ಎಂದಿದ್ದಾರೆ.
ರಮೇಶ ಏನೋ ಡಿಪ್ರೆಷನ್ ನಲ್ಲಿದ್ದಾನೆ. ನಾನೇನು ಹೇಳಲ್ಲ. ರಮೇಶ ನಮ್ಮ ಜೊತೆಗೆ ಇದ್ದವನು. ಸಿಕ್ಕಿ ಹಾಕಿಸಬೇಕು ಅಂತ ಹೇಳಿದ್ರೆ ನಾವು ಸರಿ ಇರಬೇಕಪ್ಪಾ? ಅವರೇನು ದಡ್ಡರಾ? ಐದು ಬಾರಿ ಶಾಸಕರಾಗಿದ್ದವರು. ಎಂದು ಹೇಳಿದ್ದಾರೆ.
ನಮ್ಮ ಮನೆ ಸುತ್ತಮುತ್ತಲಿನವರು ಮಾಡಿದ್ದಾರೆ ಎಂಬ ಆರೋಪಕ್ಕೆ, ಒಂದು ಕಾಲದಲ್ಲಿ ನಾವು ಜೊತೆಗಿದ್ದವರು. ರಮೇಶಗೆ ಒಳ್ಳೆಯದಾಗಲಿ ಎಂದು ನಾನು ಬಯಸಿದವನು. ಏನೇನೋ ಹುಚ್ಚುಚ್ಚಾಗಿ ಮಾತನಾಡಿದ ಮೇಲೆ ಸುಮ್ಮನಾದೆ. ರಮೇಶ ಜಾರಕಿಹೊಳಿ ನೊಂದಿದ್ದಾನೆ. ನನಗೇನು ಗೊತ್ತು ಸ್ವಾಮಿ, ಯಾರು ಸಿಡಿ ಮಾಡಿದ್ದು? ಯಡಿಯೂರಪ್ಪ, ಕನ್ನಡಿಗರ ಬಗ್ಗೆ ಮಾತಾಡಲು ಅವರಿಗೆ ನಾವು ಹೇಳಿಕೊಟ್ಟಿದ್ವಾ? ಶರ್ಟ್, ಪ್ಯಾಂಟ್ ತೆಗೆಯಿರಿ ಎಂದಿದ್ವಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.