ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರೋಕ್ಷ ಸಂದೇಶ ರವಾನಿಸಿ ಪಕ್ಷಕ್ಕೆ ಸೇರಲು ಆಹ್ವಾನಿಸಿದ್ದಾರೆ. ವಲಸಿಗರು ಕೂಡ ಅರ್ಜಿ ಹಾಕಬಹುದು ಎಂದು ಅವರು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದ ಮುಂಬೈ ಟೀಮ್ ಗೆ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ.
17 ಶಾಸಕರು ಸರ್ಕಾರ ಬೀಳಿಸಿದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಡಿ.ಕೆ. ಶಿವಕುಮಾರ್ 17 ಶಾಸಕರು ಕಾಂಗ್ರೆಸ್ ಗೆ ಬರುವುದಾದರೆ ಅರ್ಜಿ ಹಾಕಿಕೊಳ್ಳಲಿ ಎಂದು ಹೇಳಿದ್ದಾರೆ. ಪಕ್ಷ ಬಿಟ್ಟು ಹೋದ ಶಾಸಕರು ಮತ್ತೆ ಕಾಂಗ್ರೆಸ್ ಗೆ ಬರುವುದಾದರೆ ಮುಕ್ತ ಮನಸ್ಥಿತಿ ಹೊಂದಿರುವುದಾಗಿ ಶಿವಕುಮಾರ್ ನೀಡಿದ ಹೇಳಿಕೆ ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ.
ನಾನು ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರನ್ನು ಬೇಡ ಎನ್ನುವುದಿಲ್ಲ. ಎಲ್ಲರಿಗೂ ಮುಕ್ತ ಆಹ್ವಾನವಿದೆ. ರಾಜಕಾರಣ ನಿಂತ ನೀರಲ್ಲ, ಅದು ಬದಲಾವಣೆಯಾಗುತ್ತಿರುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.