alex Certify ಮೂರು ಕಂಪನಿಗಳ ಶ್ರಮದಿಂದ ನಾಲ್ಕೇ ದಿನಗಳಲ್ಲಿ ತುಂಗಭದ್ರಾ ಗೇಟ್ ದುರಸ್ತಿ: ಡಿಸಿಎಂ ಡಿ.ಕೆ. ಶಿವಕುಮಾರ್ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರು ಕಂಪನಿಗಳ ಶ್ರಮದಿಂದ ನಾಲ್ಕೇ ದಿನಗಳಲ್ಲಿ ತುಂಗಭದ್ರಾ ಗೇಟ್ ದುರಸ್ತಿ: ಡಿಸಿಎಂ ಡಿ.ಕೆ. ಶಿವಕುಮಾರ್ ಶ್ಲಾಘನೆ

ಕೊಪ್ಪಳ: ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಅವಘಡ ವಿಚಾರವಾಗಿ ವಿಪಕ್ಷಗಳು ಕೇವಲ ಟೀಕೆ ಮತ್ತು ರಾಜಕೀಯ ಮಾಡುತ್ತಿದ್ದವು. ಆದರೆ ನಮ್ಮ ಕೆಲಸಗಳು ಉಳಿದುಕೊಂಡಿತು, ಅವರ ಟೀಕೆಗಳು ಸತ್ತು ಹೋದವು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕೊಪ್ಪಳದ ಗಿಣಿಗೇರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ನಮ್ಮ ತಂತ್ರಜ್ಞರು, ಅಧಿಕಾರಿಗಳು, ಇಂಜಿನಿಯರ್ ಗಳು, ಕಾರ್ಮಿಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಈ ಭಾಗದ ಶಾಸಕರು ಅವಘಡ ನಡೆದ ದಿನದಿಂದ ಒಂದು ರಾತ್ರಿಯೂ ನಿದ್ದೆ ಮಾಡದೆ ಕೆಲಸ ಮಾಡಿದ್ದಾರೆ. ದೇವರ, ಜನರ ಆಶೀರ್ವಾದದಿಂದ ಈ ಕೆಲಸ ನಡೆದಿದೆ. ನಮ್ಮ ರೈತರನ್ನು ನಾವು ಬದುಕಿಸಿದ್ದೇವೆ ಎಂದರು.

ಕ್ರಸ್ಟ್ ಗೇಟ್ ಗಳನ್ನು 45 ವರ್ಷಗಳಿಗೊಮ್ಮೆ ಬದಲಾಯಿಸಬೇಕು ಎನ್ನುವ ವರದಿಯಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂಬ ಹೇಳಿಕೆಗೆ ನಾನು ತಂತ್ರಜ್ಞನಲ್ಲ. ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗೆ ಎಂದು ತಾಂತ್ರಿಕ ಸಮಿತಿ ರಚನೆ ಮಾಡಿದ್ದೇವೆ. ಈ ತಂಡ ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದೆ. ಅವರು ಎಲ್ಲಾ ಅಣೆಕಟ್ಟುಗಳ ಸುರಕ್ಷತಾ ವರದಿಯನ್ನು ನೀಡಲಿದ್ದಾರೆ. ಅವರ ವರದಿಯ ಮೇಲೆ ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಆ ಕೆಲಸಗಳನ್ನು ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

ತುಂಗಭದ್ರಾ ಅಣೆಕಟ್ಟಿನ ಗೇಟ್ ಅನ್ನು ಕಾರ್ಮಿಕರ, ಇಂಜಿನಿಯರ್ ಗಳ, ಅಧಿಕಾರಿಗಳ ಶ್ರಮದಿಂದ ದುರಸ್ತಿ ಮಾಡಲಾಗಿದೆ. ಅಣೆಕಟ್ಟು ತುಂಬಿದ ತಕ್ಷಣ ನಾನು ಮತ್ತು ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತೇವೆ. ಕೊಪ್ಪಳಕ್ಕೆ ವಿಮಾನ ಮಾರ್ಗದಲ್ಲಿ ಬರುವಾಗ ವೀಕ್ಷಣೆ ಮಾಡಿದೆವು. ಅಣೆಕಟ್ಟು ಶೀಘ್ರ ತುಂಬಲಿದೆ ಎಂದರು.

ನಾರಾಯಣ ಎಂಜಿನಿಯರಿಂಗ್, ಜಿಂದಾಲ್ ಮತ್ತು ಹಿಂದೂಸ್ಥಾನ್ ಇಂಜಿನಿಯರಿಂಗ್ ಈ ಮೂರು ಕಂಪೆನಿಗಳು ಮಾಡಿದ ಸಹಾಯದಿಂದ ಕೇವಲ ನಾಲ್ಕು ದಿನಗಳಲ್ಲಿ ಗೇಟ್ ದುರಸ್ತಿ ಮಾಡಲಾಯಿತು. ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡ ಪ್ರತಿಯೊಬ್ಬ ಕಾರ್ಮಿಕರನ್ನು ಗೌರವಿಸುವ ಕೆಲಸ ಸರ್ಕಾರ ಮಾಡಲಿದೆ. ಇಡೀ ದೇಶವೇ ಏನಾಗಬಹುದು ಎಂದು ಈ ಕೆಲಸವನ್ನು ಕಾತರದಿಂದ ನೋಡುತ್ತಿತ್ತು. ನಾವು ಇದರಲ್ಲಿ ಯಶಸ್ಸು ಕಂಡಿದ್ದೇವೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...