
ಬೆಳಗಾವಿ: ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯಗಳಿಲ್ಲ. ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿಡುವುದೇ ನನ್ನ ಕರ್ತವ್ಯ. ಇದರ ಹೊರತಾಗಿ ನನಗೆ ಬೇರೆ ಯಾವುದೇ ಕರ್ತವ್ಯಗಳಿಲ್ಲ. ಬೇರೆ ಯಾವುದಕ್ಕೂ ನನ್ನ ಹೆಸರನ್ನು ಉಪಯೋಗಿಸಿಕೊಳ್ಳಬೇಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾರ್ಯಕರ್ತರ ರಕ್ಷಣೆ ಮಾಡುವುದು ನನ್ನ ಮೊದಲ ಕರ್ತವ್ಯ. ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ನಾನು, ಪಕ್ಷ, ಹೈಕಮಾಂಡ್ ಉಂಟು. ಮಾಧ್ಯಮದವರು ಯಾರೋ ಹೇಳಿದ ಸುಳ್ಳನ್ನು ನಂಬಬೇಡಿ. ಶಿವಕುಮಾರ್ ಅವರಿವರನ್ನು ಭೇಟಿ ಮಾಡಿದರು, ಪಕ್ಷದಲ್ಲಿ ಬಂಡಾಯವಿದೆ ಎಂದೆಲ್ಲಾ ಹೇಳಬೇಡಿ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಂಡಾಯವೂ ಇಲ್ಲ. ಯಾರ ಜೊತೆಯೂ ನನಗೆ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ನಾನು ಎಲ್ಲರನ್ನು ಸಮಾನವಾಗಿ ಕಾಣುವ ಅಧ್ಯಕ್ಷ ಸ್ಥಾನದಲ್ಲಿದ್ದು, ನನಗೆ ಎಲ್ಲರೂ ಒಂದೇ. ಎಲ್ಲರನ್ನು ಸರಿ ಸಮಾನವಾಗಿ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ ಎಂದರು.
ರಣದೀಪ್ ಸುರ್ಜೇವಾಲಾ ಅವರನ್ನೇ ಬದಲಾವಣೆ ಮಾಡಬೇಕು ಎಂದು ಕೆಲವು ಸಚಿವರು ರಾಹುಲ್ ಗಾಂಧಿ ಅವರಿಗೆ ದೂರು ನೀಡುತ್ತಿದ್ದಾರಂತೆ ಎಂಬ ವಿಚಾರವಾಗಿ ಪ್ರತಿಕ್ರಿಯಿದ್ಸಿ, ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ. ನಾನು ಭಾನುವಾರ ಹಿರಿಯ ಶಾಸಕರ ಮನೆಗೆ ಭೇಟಿ ನೀಡಿದ್ದೆ. ಅವರಿಗೆ ಯಾರ ಜೊತೆಯೋ ಜಗಳ ಇತ್ತಂತೆ ಎಂದು ಒಂದಷ್ಟು ಮಾಧ್ಯಮಗಳು ಹೊಸ ಕಥೆಯನ್ನು ಸೃಷ್ಟಿಸಿದ್ದವು. ಫಿರೋಜ್ ಸೇಠ್ ಅವರು ಪಕ್ಷದ ಹಿರಿಯ ನಾಯಕರು. ನನ್ನ ಜೊತೆ ಶಾಸಕರಾಗಿ ಕೆಲಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಸಮಾವೇಶ ನಡೆಯುತ್ತಿದೆ. ಅವರನ್ನು ಈ ಸಮಾವೇಶದ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಸಂಘಟನೆ ದೃಷ್ಟಿಯಿಂದ ಜಿಲ್ಲಾ ಅಧ್ಯಕ್ಷರ ಜೊತೆ ಹೋಗಿ ಭೇಟಿ ಮಾಡಿದ್ದೆ. ಆದರೆ, ಮಾಧ್ಯಮಗಳಲ್ಲಿ ಏನೇನೋ ವರದಿ ಬಿತ್ತರ ಮಾಡಲಾಗಿದೆ ಎಂದು ಗುಡುಗಿದರು.
ಪಕ್ಷಕ್ಕಾಗಿ ಮೊದಲಿನಿಂದಲೂ ಹಲವಾರು ತ್ಯಾಗಗಳನ್ನು ಮಾಡಿದ್ದೇನೆ. ಧರಂಸಿಂಗ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿಯೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ. ನನಗೆ ಪಕ್ಷವೇ ಮುಖ್ಯ. ನಾನು ಪಕ್ಷದಿಂದ ಬೆಳೆದವನು. ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿತ್ತು. ಮಾಧ್ಯಮದವರು ಯಾರ ಮಾತನ್ನೋ ಕೇಳಬೇಡಿ ಎಂದರು. ನಾನು ತ್ಯಾಗ ಮಾಡಿಕೊಂಡೆ ಬರುತ್ತೇನೆ. ನನಗೆ ಫಲದ ಅವಶ್ಯಕತೆಯೇ ಇಲ್ಲ. ಜನಕ್ಕೆ ಒಳೆಯದಾಗುತ್ತಿದೆಯಲ್ಲ, ಅಷ್ಟು ಸಾಕು ನನಗೆ ಎಂದು ಹೇಳಿದರು.