
ಬೆಂಗಳೂರು: ಮುಡಾ ಹಗರಣ ಆರೋಪ ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ, ಇದು ಹೆಚ್ಚಿನ ದಿನ ನಡೆಯುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ, ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಪ್ರಾರಂಭದಲ್ಲೇ ನಾನು ಹೇಳಿದ್ದೆ. ಬಿಜೆಪಿ ಹಾಗೂ ಜೆಡಿಎಸ್ ನವರು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಿದಾಗಲೇ, ನಾನು ಏನು ಹೇಳಬೇಕೋ ಹೇಳಿದ್ದೆ. ಇದು ರಾಜಕೀಯ ಪ್ರೇರಿತ ಆರೋಪ ಎಂದು. ಯಾವ ದಾಖಲೆಯಲ್ಲೂ ಸಿದ್ದರಾಮಯ್ಯ ಅವರ ಸಹಿ ಇಲ್ಲದಿರುವಾಗ, ಅವರಿಗೆ ಸಂಬಂಧವೇ ಇಲ್ಲದಿರುವಾಗ ಅವರ ಪಾತ್ರ ಹೇಗೆ ಬರುತ್ತದೆ? ಎಂದು ಪ್ರಶ್ನಿಸಿದರು.
ಆಸ್ತಿ ಕಳೆದುಕೊಂಡವರು ಪರಿಹಾರ ಕೇಳುವುದು ಸಹಜ. ನಾವು ನೀವು ಕೂಡ ಕೇಳುತ್ತೇವೆ. ಅವರು ಕೊಟ್ಟಿದ್ದಾರೆ. ನಮಗೆ ಇಂತಹುದೇ ಜಾಗದಲ್ಲಿ ನಿವೇಶನ ನೀಡಿ ಎಂದು ಅವರು ಎಲ್ಲಿಯೂ ಕೇಳಿಲ್ಲ. ಆದರೂ ಅನಗತ್ಯ ಗೊಂದಲ ಬೇಡ ಎಂದು ಅವರು ಈ ನಿವೇಶನಗಳನ್ನು ವಾಪಾಸ್ ನೀಡಿದ್ದಾರೆ. ಯಾವುದೇ ಪ್ರಕರಣ ದಾಖಲಿಸುವಾಗ ಅದಕ್ಕೆ ಪೂರಕವಾದ ದಾಖಲೆ ಬೇಕು. ಲೋಕಾಯುಕ್ತ ಸಂಸ್ಥೆ ತನ್ನ ಕರ್ತವ್ಯ ಮಾಡಿದೆ. ಬಿಜೆಪಿಯವರು ತಮ್ಮ ಹೋರಾಟ ಮಾಡಿಕೊಳ್ಳಲಿ ಎಂದರು.
ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆ. ಸುಪ್ರೀಂ ಕೋರ್ಟ್ ತೀರ್ಪು ಏನಿದೆ ಗೊತ್ತಿದೆಯೇ? ಸ್ಥಳೀಯ ಮಟ್ಟದ ಯಾವುದೇ ಸಂಸ್ಥೆಗಳನ್ನು ದುರ್ಬಲಗೊಳಿಸಬಾರದು ಎಂಬ ನಿರ್ದೇಶನವಿದೆ. ಇನ್ನು ಹೈಕೋರ್ಟ್ ಕೂಡ ಲೋಕಾಯುಕ್ತ ಸ್ವಾಯತ್ತ ಸಂಸ್ಥೆ ಎಂದು ಹೇಳಿದೆ. ಅವರವರು ಅವರ ಕೆಲಸ ಮಾಡುತ್ತಿದ್ದಾರೆ. ಯಾರೇ ಸಿಎಂ ಆಗಿರಲಿ, ಬೊಮ್ಮಾಯಿ ಅವರೇ ಸಿಎಂ ಆಗಿರಲಿ, ಮುಖ್ಯಮಂತ್ರಿ ಹೇಳಿದಂತೆ ಲೋಕಾಯುಕ್ತ ಪೊಲೀಸರು ಕೇಳುತ್ತಾರಾ? ಇದರಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪವಿಲ್ಲ ಎಂದು ಹೇಳಿದರು.