
ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣ ವಿಚಾರವಾಗಿ ಸಚಿವ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ರಾಜಣ್ಣ, ಸಿಎಂ ಸಿದ್ದರಾಮಯ್ಯ ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು. ಅವರನ್ನು ಯಾರು ಭೇಟಿ ಮಾಡಿದರು ಎಂಬುದರ ಬಗ್ಗೆ ನನ್ನನ್ನು ಕೇಳಬೇಕಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ, ರಾಜೇಂದ್ರ ರಾಜಣ್ಣ ಆಗಲಿ ಯರೇ ಆಗಲಿ ಮುಖ್ಯಮಂತ್ರಿಗಳನ್ನು ಯಾರು ಬೇಕಾದರೂ ಭೇಟಿ ಮಾಡಿಕೊಳ್ಳಲಿ. ನನ್ನ ಇಲಾಖೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ನಾನು ಉತ್ತರಕೊಡಬಲ್ಲೆ. ಮುಖ್ಯಮಂತ್ರಿಗಳು ಅಂದಮೇಲೆ ಎಲ್ಲಾ ಸಚಿವರು, ಶಾಸಕರು, ಸಂಸದರು, ಸಾರ್ವಜನಿಕರು ಭೇಟಿ ಮಾಡುವುದು ಸಹಜ. ನನ್ನನ್ನೂ ಅನೇಕರು ಭೇಟಿ ಮಾಡುತ್ತಾರೆ ಎಂದರು.
ಹೇಮಾವತಿ ಕೆನಾಲ್ ವಿಚಾರವಾಗಿ ಶಾಸಕ ರಂಗನಾಥ್ ಅವರು ತೊಂದರೆ ಮಾಡುತ್ತಿದ್ದಾರೆ ಎಂಬ ರಾಜೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಅವರು ಏನು ಬೇಕಾದರೂ ಮಾತನಾಡಲಿ. ಹೇಮಾವತಿ ನಾಲೆ ಬಗ್ಗೆ ಇಂದಲ್ಲ, 20-30 ವರ್ಷಗಳಿಂದಲೂ, ವೈ.ಕೆ ರಾಮಯ್ಯ ಅವರ ಕಾಲದಿಂದಲೂ ಚರ್ಚೆ ನಡೆಯುತ್ತಿದೆ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ನಾವು ಇದನ್ನು ಪಾಸ್ ಮಾಡಿದ್ದೆವು. ಆ ಕೆಲಸ ಈಗಲೂ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.