ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಕುರಿತ ಚರ್ಚೆ ಮುನ್ನೆಲೆಗೆ ಬಂದಿದ್ದು, ಇದಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಡಿದ್ದಾರೆ.
‘ಸಿದ್ದರಾಮಯ್ಯ ಅನುಮತಿ ಕೊಟ್ರೆ ನಾನು ಸಿಎಂ ಆಗ್ತೀನಿ’ ಎಂಬ ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಡೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ.
ದೇಶಪಾಂಡೆ ಹಿರಿಯ ನಾಯಕರು. ಅನುಭವಿ ರಾಜಕಾರಣಿಗಳು. ಸಿಎಂ ಆಗಬೇಕು ಎಂದು ಆಸೆಪಡುವುದರಲ್ಲಿ ತಪ್ಪೇನಿಲ್ಲ. ಅವರು ಯಾವ ನಿರೀಕ್ಷೆಯಲ್ಲಿದ್ದಾರೆ ಗೊತ್ತಿಲ್ಲ. ಆಸೆ ಪಡುವುದು ತಪ್ಪಲ್ಲ, ಆದರೆ ಆಸೆ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಲ್ಲ. ಪಕ್ಷ, ಹೈಕಮಾಂಡ್ ಅವರಿಗೆ ಕೊಡಬೇಕಿರುವ ಗೌರವ ಕೊಡುತ್ತದೆ. ಆದರೆ ಸದ್ಯಕ್ಕೆ ಸಿಎಂ ಹುದ್ದೆ ಖಾಲಿಯಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅನುಮತಿ ಕೊಟ್ರೆ ನಾನು ಸಿಎಂ ಆಗ್ತೇನೆ ಎಂಬ ದೇಶಪಾಂಡೆ ಹೇಳಿಕೆ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಕೂಡ ಸಿಎಂ ಆಗುವ ಆಸೆ ಯಾರಿಗಿಲ್ಲ ಹೇಳಿ? ನನಗೂ ಸಿಎಂ ಆಗಬೇಕು ಎಂಬ ಆಸೆಯಿದೆ. ಅವಕಾಶಕೊಟ್ಟರೆ ನಾನೂ ಆಗ್ತೀನಿ ಎಂದು ಅಭಿಲಾಷೆ ವ್ಯಕ್ತಪಡಿಸಿದ್ದರು.