ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ 34 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಅಧಿಕೃತ ಆದೇಶ ಹೊರಡಿಸಿದೆ. 2 ವರ್ಷಕ್ಕೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಸಿಸಿಎಂ ಡಿ.ಕೆ.ಶಿವಕುಮಾರ್, ಬೇರೆಯವರಿಗೂ ಅಧಿಕಾರ ಹಂಚಬೇಕು. ಹಾಗಾಗಿ 2 ವರ್ಷಕ್ಕೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸೀಮಿತ ಮಾಡಿದ್ದೇವೆ ಎಂದರು.
ಶೀಘ್ರವೇ ಲೋಕಸಭಾ ಚುನಾವಣೆ ಬರಲಿದೆ, ನೀತಿ ಸಂಹಿತೆ ಜಾರಿಯಾಗಲಿದೆ. 2 ವರ್ಷದ ಬಳಿಕ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಹೈಕಮಾಂಡ್ ಆದೇಶವನ್ನು ನಾವು ಪಾಲಿಸುತ್ತೇವೆ. ಇದರಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸ್ಟ್ಯಾಂಡ್ ಏನೂ ಇಲ್ಲ. ಪಕ್ಷಕ್ಕೆ ಅನೇಕ ಜನರು ದುಡಿದಿದ್ದಾರೆ. ಅವರಿಗೂ ಅಧಿಕಾರ ಸಿಗಬೇಕು ಎಂದು ಹೇಳಿದರು.