ಬೆಂಗಳೂರು: ಅತ್ಯಾಚಾರ ಹಾಗೂ ಹೆಚ್ ಐವಿ ಸೋಂಕಿತೆ ಬಳಸಿಕೊಂಡು ಹನಿಟ್ರ್ಯಾಪ್ ಷಡ್ಯಂತ್ರದಲ್ಲಿ ಬಂಧಿತರಾಗಿರುವ ಬಿಜೆಪಿ ಶಾಸಕ ಮುನಿರತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಬಿಜೆಪಿ ನಾಯಕರೇ ಮಾತನಾಡಬೇಕು ಎಂದಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಸ್ವಪಕ್ಷದ ನಾಯಕರ ವಿರುದ್ಧವೂ ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮುನಿರತ್ನ ಪ್ರಕರಣದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಆರ್.ಅಶೋಕ್ ವಿರುದ್ಧದ ಷಡ್ಯಂತ್ರ ನೋಡಿ ನನಗೆ ದಿಗ್ಭ್ರಮೆಯಾಗಿದೆ ಎಂದು ಹೇಳಿದರು.
ಹೆಚ್ ಐವಿ ಹರಡಿಸುವ ಸಂಚು ಆರೋಪ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅಶೋಕಣ್ಣ ವಿರುದ್ಧದ ಷಡ್ಯಂತ್ರ ನೋಡಿ ದಿಗ್ಭ್ರಮೆಯಾಗಿದೆ. ಈ ರೀತಿಯ ಸಂಚು ನಾವೆಲ್ಲೂ ನೋಡಿರಲಿಲ್ಲ. ಈ ಬಗ್ಗೆ ಅಶೋಕಣ್ಣ, ಸಿ.ಟಿ.ರವಿಯಣ್ಣ, ವಿಜಯೇಂದ್ರಣ್ಣ, ಕುಮಾರಣ್ಣ, ಆರೋಗ್ಯ ಅಧಿಕರಿಯೂ ಆಗಿರುವ ಮಂಜುನಾಥ್ ಅವರೇ ಉತ್ತರ ಕೊಡಬೇಕು ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.